ಜಿಲ್ಲೆ

ಬೆಳೆ ಹಾನಿ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಿ

ವಿವೇಕಾನಂದ ದಾಸನಕೊಪ್ಪ

ಹಾನಗಲ್ಲ: ಸತತ ಮಳೆಯಿಂದಾಗಿ ಗೋವಿನಜೋಳ ಹಾಗೂ ಸೋಯಾಬೀನ್ ಬೆಳೆ ಕೈಕೊಟ್ಟಿವೆ. ಈ ಕುರಿತು ತಕ್ಷಣ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸಿ ಪರಿಹಾರ ಒದಗಿಸಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಒತ್ತಾಯಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಅಧಿಕಾರಿಗಳ, ರೈತರ ಸಭೆಯಲ್ಲಿ ಅವರು ಮಾತನಾಡಿದರು.

ಮುಂಗಾರಿನಲ್ಲಿ ಮಳೆ ವಿಳಂಬವಾದ್ದರಿಂದ ಬಿತ್ತನೆಗೆ ಹಿನ್ನಡೆಯಾಗಿತ್ತು. ನಂತರ ಜಿಟಿಜಿಟಿ ಹಿಡಿದ ಮಳೆಯಿಂದಾಗಿ ಬಿತ್ತಿದ ಬೆಳೆಗಳು ತೇವಾಂಶ ಹೆಚ್ಚಾಗಿ ನಾಶವಾಗಿವೆ. ಈಗ ಪರ್ಯಾಯ ಬೆಳೆ ಬೆಳೆಯಲು ಕೃಷಿ-ಕಂದಾಯ ಇಲಾಖೆಗಳ ಅಧಿಕಾರಿಗಳು ಜಂಟಿ ಸರ್ವೆಕಾರ್ಯ ಕೈಗೊಳ್ಳುವ ಅಗತ್ಯವಿದೆ ಎಂದರು.

ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ರವಿ ಕೊರವರ, ಈಗಾಗಲೇ ಜಿಲ್ಲಾಡಳಿತದಿಂದ ಬೆಳೆ ಹಾನಿಯಾದ ವರದಿ ಸಲ್ಲಿಸಲು ನಿರ್ದೇಶನ ಬಂದಿದ್ದು, ಕೃಷಿ ಇಲಾಖೆ ವರದಿಯಂತೆ ತಾಲೂಕಿನಲ್ಲಿ 24000 ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ ಬಿತ್ತನೆಯಾಗಿದೆ. ಅಧಿಕ ಮಳೆಯಾದ ಹಿನ್ನೆಲೆಯಲ್ಲಿ ಬೆಳೆ ಹಾನಿಯಾಗಿದೆ. ಕೃಷಿ-ಕಂದಾಯ ಇಲಾಖೆಗಳ ಜಂಟಿ ಸಮೀಕ್ಷೆ ನಡೆಸಿ ಶೀಘ್ರದಲ್ಲಿ ವರದಿ ಸಲ್ಲಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಕೆ. ಮೋಹನಕುಮಾರ ಅವರಿಗೆ ಸೂಚಿಸಿದರು.

ಕಳೆದ ವರ್ಷದ ಅತಿವೃಷ್ಟಿಗೆ ಅಡಕೆಗೆ ಕೊಳೆರೋಗ ಎದುರಾಗಿತ್ತು. ಇದರ ಪರಿಹಾರಕ್ಕಾಗಿ 1561 ಪ್ರಕರಣಗಳು ತಹಸೀಲ್ದಾರರ ಲಾಗಿನ್‌ನಲ್ಲಿ 1 ವರ್ಷದಿಂದ ಬಾಕಿ ಉಳಿದಿವೆ. ಇದರಿಂದಾಗಿ ರೈತರಿಗೆ ಪರಿಹಾರ ವಿತರಣೆಯಾಗಿಲ್ಲ. ತಹಸೀಲ್ದಾರರು ಅವುಗಳಿಗೆ ತಕ್ಷಣ ಅನುಮೋದನೆ ನೀಡಬೇಕು. ಇದಲ್ಲದೇ ಕಳೆದ ವರ್ಷದ ಅಡಕೆಯ ಬೆಳೆವಿಮಾ ಪರಿಹಾರ ಇನ್ನೂ ಬಿಡುಗಡೆಯಾಗಿಲ್ಲ, ಕೂಡಲೇ ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದು ರುದ್ರಪ್ಪ ಹಣ್ಣಿ ಆಗ್ರಹಿಸಿದರು.

ಯತ್ತಿನಹಳ್ಳಿ-ಶ್ಯಾಡಗುಪ್ಪಿ ಮಾರ್ಗದ ಧರ್ಮಾ ಕಾಲುವೆಯಲ್ಲಿ ಹೂಳು, ಗಿಡಗಂಟಿಗಳು ಬೆಳೆದಿದ್ದರಿಂದಾಗಿ ನೀರು ಹರಿಯದಂತಾಗಿದೆ. ಹೀಗಾಗಿ ಅಕ್ಕಿಆಲೂರು ಕೆರೆಯಿಂದ ಮುಂದೆ ನೀರು ಹರಿಯದೇ ನೀರು ನದಿಗೆ ಸೇರಿ ಪೋಲಾಗುತ್ತಿದೆ. ಕಾಲುವೆ ನೀರು ನಂಬಿಕೊಂಡು ಭತ್ತ ನಾಟಿ ಮಾಡಿದ ರೈತರು ಈ ನೀರಿನಿಂದ ವಂಚಿತರಾಗುವಂತಾಗಿದೆ. ಕೂಡಲೇ ಹೂಳು ತೆಗೆಸಬೇಕು ಎಂದು ರೈತ ಷಣ್ಮುಖ ಅಂದಲಗಿ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ನೀರಾವರಿ ಇಲಾಖೆ ಎಇಇ ಪ್ರಲ್ಹಾದ ಶೆಟ್ಟಿ, ಕಾಲುವೆ ಕಾಮಗಾರಿಗೆ ಅನುದಾನದ ಕೊರತೆಯಿದೆ. ಹೂಳು ತೆಗೆಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಹೆಸ್ಕಾಂ ಎಇಇ ಜಿ.ಎಸ್. ಆನಂದ, ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ, ತೋಟಗಾರಿಕೆ ಲಾಖೆ ಅಧಿಕಾರಿಗಳಾದ ಮೃತ್ಯುಂಜಯ ಹಿರೇಮಠ, ಶಿವಕುಮಾರ ಬಿರಾದಾರ, ಸರಸ್ವತಿ, ಪಶು ವೈದ್ಯಾಧಿಕಾರಿ ಡಾ.ಗಿರೀಶ ರೆಡ್ಡೇರ, ರೈತ ಸಂಘದ ಸೋಮಣ್ಣ ಜಡೆಗೊಂಡರ, ಅಡಿವೆಪ್ಪ ಆಲದಕಟ್ಟಿ, ಶ್ರೀಕಾಂತ ದುಂಡಣ್ಣನವರ, ಶ್ರೀಧರ ಮಲಗುಂದ, ರಾಜೀವ ದಾನಪ್ಪನವರ, ಮಾಲತೇಶ ಕಲ್ಲಿಕರೆಣ್ಣವರ, ಸಿದ್ದೇಶ ಭಂಗಿ, ಶಂಭುಗೌಡ ಪಾಟೀಲ, ಅನಿಲ ಚಿಕ್ಕಾಂಶಿ, ಉಮೇಶ ಮೂಡಿ ಇತರರು ಉಪಸ್ಥಿತರಿದ್ದರು.

ಪ್ರತಿಭಟಿಸಿದ್ದರಿಂದ ಸಭೆ

ಅಡಕೆ ಬೆಳೆ ವಿಮೆ ಪರಿಹಾರ, ಅಕ್ರಮ-ಸಕ್ರಮ ವಿದ್ಯುತ್ ಸಂಪರ್ಕ, ಹಾನಿಯಾದ ಬೆಳೆಗಳ ಸಮೀಕ್ಷೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರೈತ ಸಂಘದಿಂದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಕೈಗೊಳ್ಳಲಾಗಿತ್ತು. ತಹಸೀಲ್ದಾರ್ ರವಿ ಕೊರವರ ಅವರು ರೈತರ ಮನವೊಲಿಸಿ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ ಎಂದು ಭರವಸೆ ನೀಡಿದರು. ಇದರಿಂದಾಗಿ ರೈತರು ಸಭೆಗೆ ಆಗಮಿಸಿ ಚರ್ಚಿಸಿದರು.