ಜಿಲ್ಲೆ

ಬಿಬಿಎಂಪಿ ಚುನಾವಣೆ ನಡೆಸಿ, ಭ್ರಷ್ಟಾಚಾರ ನಿಯಂತ್ರಿಸಿ :ಮುಖ್ಯಮಂತ್ರಿ ಚಂದ್ರು ಆಗ್ರಹ

Bengaluru - Political - Vilas Melagiri

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಶೀಘ್ರದಲ್ಲೇ ನಡೆಸುವಂತೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು. ಬಿಬಿಎಂಪಿಯಲ್ಲಿ ನಡೆಯುತ್ತಿರುವ ಬೃಹತ್ ಭ್ರಷ್ಟಾಚಾರವನ್ನು ತಡೆಯಬೇಕಿದ್ದರೆ ತಕ್ಷಣ ಚುನಾವಣೆ ನಡೆಯಬೇಕು. ಸರ್ಕಾರ ಮತ್ತು ಗುತ್ತಿಗೆದಾರರ ನಡುವಣ ವ್ಯವಹಾರದ ಎಲ್ಲ ದಾಖಲೆಗಳನ್ನು ತನಿಖೆ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಬಿಬಿಎಂಪಿಯಲ್ಲಿ ಗುತ್ತಿಗೆದಾರರ ಬಾಕಿ ಎಷ್ಟಿದೆ. ಕೆಲಸಗಳಿಗೆ ಎಷ್ಟು ವ್ಯಯಿಸಲಾಗಿದೆ, ಎಷ್ಟು ಭ್ರಷ್ಟಾಚಾರ ನಡೆದಿದೆ ಎಂಬ ಮಾಹಿತಿ ಬಹಿರಂಗಪಡಿಸಬೇಕು. ಬಿಜೆಪಿ ಸರ್ಕಾರ 40ಪರ್ಸೆಂಟ್ ಕಮಿಷನ್, ಈಗ ಕಾಂಗ್ರೆಸ್ ಸರ್ಕಾರ ಬಾಕಿ ಹಣ ಬಿಡುಗಡೆಗೆ 15 ಪರ್ಸೆಂಟ್ ಕಮಿಷನ್ ಹಣವನ್ನು ಇವರೇ ಲೂಟಿ ಹೊಡೆದರೆ ಅಭಿವೃದ್ಧಿ ಕೆಲಸಗಳಿಗೆ ಹಣವೆಲ್ಲಿ ಉಳಿಯುತ್ತದೆ? ಉಳಿದ ಅಲ್ಪಸ್ವಲ್ಪ ಹಣದಲ್ಲಿ ಮಾಡಿದ ರಸ್ತೆಗಳು, ಒಳಚರಂಡಿ ವ್ಯವಸ್ಥೆಗಳು ಹಾಗೂ ಇನ್ನಿತರ ಕೆಲಸಗಳು ಕಳಪೆಯಾಗದೆ ಇರಲು ಹೇಗೆ ಸಾಧ್ಯ? ಭ್ರಷ್ಟಾಚಾರ ಸಮಸ್ಯೆಯಿಂದ ರಸ್ತೆಗುಂಡಿಗಳು, ಅಪಾಯಕಾರಿ ಒಳಚಂರಂಡಿ ಸಮಸ್ಯೆಗಳು ಎಲ್ಲವೂ ಹಾಗೆಯೇ ಇವೆ ಎಂದು ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದರು.

ಚುನಾವಣಾ ಆಯೋಗದ ನಿಯಂತ್ರಣ
2024ರ ಲೋಕಸಭೆ ಚುನಾವಣೆಗೂ ಮುನ್ನ ಹಾಲಿ ಮುಖ್ಯ ಚುನಾವಣಾ ಆಯುಕ್ತರು ನಿವೃತ್ತರಾಗುತ್ತಿದ್ದಾರೆ. ಅದಕ್ಕೂ ಮೊದಲೇ ತನಗೆ ಬೇಕಾದ ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವಂತಹ ಸಂದರ್ಭವನ್ನು ಸೃಷ್ಟಿ ಮಾಡಿಕೊಳ್ಳುವ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸಿದೆ ಎಂದು ದೂರಿದರು.
ಮೊದಲು ಆಯ್ಕೆ ಸಮಿತಿಯಲ್ಲಿ ಮುಖ್ಯನ್ಯಾಯಮೂರ್ತಿ, ಪ್ರಧಾನಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರು ಇರುತ್ತಿದ್ದರು. ಈ ಕಾಯ್ದೆಯನ್ನು ವಜಾಗೊಳಿಸಿರುವ ಕೇಂದ್ರ ಸರ್ಕಾರ ಹೊಸ ಮಸೂದೆಯನ್ನು ಹೊರಡಿಸಿದೆ. ಇದರ ಪ್ರಕಾರ ಮುಖ್ಯ ಚುನವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಗೆ ಪ್ರಧಾನಮಂತ್ರಿ ಮುಖ್ಯಸ್ಥರಾಗಿರುತ್ತಾರೆ. ಒಬ್ಬ ಸಂಪುಟದ ಸಚಿವ ಹಾಗೂ ವಿರೋಧ ಪಕ್ಷದ ಒಬ್ಬ ಸದಸ್ಯ ಇರುತ್ತಾರೆ. ಈ ಮೂಲಕ ಸುಲಭವಾಗಿ ತನಗೆ ಬೇಕಾದ ವ್ಯಕ್ತಿಯನ್ನೇ ಪ್ರಮುಖ ಸ್ಥಾನಕ್ಕೆ ಕೂರಿಸುವ ಮೂಲಕ ಚುನಾವಣೆಯನ್ನು ಗೆಲ್ಲಲು ಪ್ರಯತ್ನಿಸುತ್ತಿದೆ. ಇದು ಸಂವಿಧಾನ ವಿರೋಧಿ ಕೃತ್ಯ. ಇದನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

ಪಕ್ಷದ ಉಪಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಿಬಿಎಂಪಿ ಚುನಾವಣೆ ಬಗ್ಗೆ ನಿರುತ್ಸಾಹ ತೋರುತ್ತಿದೆ. ಈ ಮೂಲಕ ಭ್ರಷ್ಟಾಚಾರಕ್ಕೆ ಬೆಂಬಲಿಸುತ್ತಿದೆ ಎಂದು ಆರೋಪಿಸಿದರು. ರಾಜ್ಯ ಉಪಾಧ್ಯಕ್ಷ ಸುರೇಶ್ ರಾಥೋಡ್, ಮುಖಂಡರಾದ ಸತೀಶ್, ಜಗದೀಶ ವಿ. ಸದಂ ಉಪಸ್ಥಿತರಿದ್ದರು.