ಜಿಲ್ಲೆ

ಬೆಂವಿವಿಯ ಭೂಪ್ರದೇಶದಲ್ಲಿ ಆಗಿರುವ ಅತಿಕ್ರಮದ ಬಗ್ಗೆ ಸರ್ವೇ ನಡೆಸಿ: ಸಚಿವ ಡಾ.ಎಂ.ಸಿ.ಸುಧಾಕರ್ ಸೂಚನೆ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ೧೨೦೧ ಎಕರೆ ಭೂಪ್ರದೇಶದಲ್ಲಿ ಆಗಿರುವ ಅತಿಕ್ರಮ ಹಾಗೂ ವಿ.ವಿ ಜಮೀನಿನ ಅರ್.ಟಿ.ಸಿ ಹೊಂದಿರುವ ಖಾಸಗಿ ವ್ಯಕ್ತಿಗಳ ಬಗ್ಗೆ ಸಂಪೂರ್ಣ ಸರ್ವೇ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


ಬೆಂಗಳೂರು ವಿ.ವಿಯ ವ್ಯಾಪ್ತಿಗೆ ಒಳಪಡುವ ಒಟ್ಟು ೧೨೦೧ ಎಕರೆ ಭೂಪ್ರದೇಶದಲ್ಲಿ ಗುತ್ತಿಗೆ ಆಧಾರದ ಮೇಲೆ ನೀಡಿರುವ ಭೂ ಪ್ರದೇಶವು ಸೇರಿದಂತೆ ಬಳಕೆಯಾಗುತ್ತಿರುವ ಪ್ರದೇಶದ ವಿವರಣೆ ಕುರಿತಂತೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಶ್ರೀಕರ್, ಭೂಮಾಪನ ಇಲಾಖೆಯ ಆಯುಕ್ತ ಮಂಜುನಾಥ್, ಬೆಂಗಳೂರು ವಿ.ವಿ ಕುಲಸಚಿವರಾದ ಲತೀಫ್ ಸೇರಿದಂತೆ ಎರಡೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ವಿ.ವಿ ಭೂಪ್ರದೇಶಕ್ಕೆ ಸಂಬಂಧಪಟ್ಟ ಕೈಬರಹದ ದಾಖಲೆ ಹಾಗೂ ಈಗಿನ ಕಂಪ್ಯೂಟರ್ ದಾಖಲೆಗಳನ್ನು ಸಂಗ್ರಹಿಸಿ, ಮೂಲ ಟಿಪ್ಪಣಿ, ಎಡ ಬಲ ಆಕರಬಂದು, ಸೇರಿ ಎಲ್ಲಾ ದಾಖಲೆಗಳನ್ನು ಭೂಮಾಪನ ಇಲಾಖೆಯ ಸಹಕಾರದೊಂದಿಗೆ ಸಂಗ್ರಹಿಸುವಂತೆ ಸೂಚಿಸಿದರು.


ಒಟ್ಟು ವಿಸ್ತೀರ್ಣದ ೧೨೦೧ ಎಕರೆ ಭೂಮಿಯಲ್ಲಿ ಸರ್ವೇ ಮಾಡಿದಾಗ ೧೧೮೪.೧೬ ಎಕರೆ ವಿಸ್ತೀರ್ಣ ದೊರೆತಿದೆ. ಈಗ ಒಟ್ಟು ೨೭೮ ಎಕರೆ ಭೂಪ್ರದೇಶವನ್ನು ೨೬ ಶಿಕ್ಷಣ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಆದರೆ ಈ ಗುತ್ತಿಗೆ ಶಿಕ್ಷಣ ಸಂಸ್ಥೆಗಳು ೩೧೩ ಎಕರೆ ಸ್ವಾಧೀನದಲ್ಲಿರುವುದು ಕಂಡುಬಂದಿದೆ. ಹಾಗೆಯೆ ದಾಖಲೆಯ ಪ್ರಕಾರ ೩೪.೪ ಎಕರೆ ಅತಿಕ್ರಮ ಪ್ರದೇಶವಾಗಿದ್ದು, ಒಟ್ಟು ೪೩.೨೪ ಎಕರೆಯಲ್ಲಿ ಒತ್ತುವರಿದಾರರ ಸ್ವಾಧೀನದಲ್ಲಿರುವುದು ಕಂಡುಬಂದಿದೆ.


ಅತಿಕ್ರಮಗೊಂಡಿರುವ ಪ್ರದೇಶಗಳ ಪೈಕಿ ೧೯ ಎಕರೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಈ ಎಲ್ಲಾ ವಿವರಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿದ ಸಚಿವರು ಸಂಪೂರ್ಣ ದಾಖಲೆ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಕಾನೂನುಬದ್ಧ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಸೂಚಿಸಿದರು.
ಭೂಮಾಪನ ಇಲಾಖೆ ಹಾಗೂ ವಿವಿ ಜಂಟಿಯಾಗಿ ಸರ್ವೇ ನಡೆಸಿ ವಿವಿ ಆಸ್ತಿಯನ್ನು ಕಾಪಾಡಿಕೊಳ್ಳುವ ಮೂಲಕ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಉಳಿಸಿಕೊಳ್ಳುವ ಜವಾಬ್ದಾರಿಯಿದೆ ಎಂದು ಸಚಿವ ಡಾ.ಎಂ. ಸಿ.ಸುಧಾಕರ್ ಸೂಚಿಸಿದರು.