ಸರಗೂರು: ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಶೀಘ್ರದಲ್ಲೇ ಜಂಟಿ ಸರ್ವೇ ನಡೆಸಿ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ರೈತರಿಗೆ ಜಮೀನನ್ನು ಉಳುಮೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಸಭೆ ಬಳಿಕ ಸಾರ್ವಜನಿಕರ ಕುಂದುಕೊರತೆಗಳ ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿದರು.
ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ರೈತರಿಗೆ ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದಿದೆ. ತಾಲೂಕಿನ ಹಲವು ಗಡಿ ಗ್ರಾಮಗಳು ಕಾಡಂಚಿನ ಪ್ರದೇಶದಲ್ಲಿದ್ದು, ಜಮೀನು ಕೂಡ ಇದೆ. ಹಲವು ವರ್ಷಗಳಿಂದ ಸಾವಿರಾರು ರೈತರು ಜಮೀನುಗಳನ್ನು ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಸರ್ಕಾರ ಅವರಿಗೆ ಸಾಗುವಳಿ ಪತ್ರ ವಿತರಿಸಲಾಗಿದೆ. ಇನ್ನು ಕೆಲವರಿಗೆ ಸಾಗುವಳಿ ಪತ್ರ ವಿತರಿಸಬೇಕಿದೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಸಾಗುವಳಿ ಪತ್ರ ನೀಡಲು ತಡೆಯಾಜ್ಞೆ ತಂದಿದ್ದಾರೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಹೀಗಾಗಿ ಅಧಿಕಾರಿಗಳು ಕೂಡಲೇ ಜಂಟಿ ಸರ್ವೇ ನಡೆಸಬೇಕು ಎಂದು ತಾಕೀತು ನೀಡಿದರು.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೊಂದಿಗೆ ಚರ್ಚಿಸಿ ತಾಲೂಕಿನ ರೈತರಿಗೆ ಸಾಗುವಳಿ ಪತ್ರ ನೀಡಲು ಕ್ರಮವಹಿಸಲಾಗುವುದು. ಜಿಲ್ಲಾಧಿಕಾರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮುಂದಾಗಲಾಗುವುದು ಎಂದು ಭರವಸೆ ನೀಡಿದರು.
ತಹಸೀಲ್ದಾರ್ ಮೋಹನಕುಮಾರಿ ಮಾತನಾಡಿ, ಈಗಾಗಲೇ ರಾಜ್ಯ ಕಂದಾಯ ಇಲಾಖೆ ಸೂಚನೆ ನೀಡಿದ್ದು, ತಾಲೂಕಿನಲ್ಲಿ ಸುಮಾರು ಕಡೆ ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಒಂದೆರಡು ಭಾಗದಲ್ಲಿ ಆಯ್ಕೆ ಮಾಡಿಕೊಂಡು ಜಂಟಿ ಸರ್ವೇ ನಡೆಸಿದ್ದಲ್ಲಿ ಸಮಸ್ಯೆಗಳು, ಗೊಂದಲಗಳ ಬಗ್ಗೆ ಮಾಹಿತಿ ತಿಳಿಯಲಿದೆ ಎಂದು ಹೇಳಿದರು.
ಅರಣ್ಯ ಇಲಾಖೆ ಅಧಿಕಾರಿಗಳು, ರೈತರ ನಡುವೆ ವಾಗ್ವಾದ: ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರು ಮತ್ತು ರೈತರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಅಡ್ಡಗಟ್ಟಿ ನಮ್ಮ ಜಮೀನಿನಲ್ಲಿ ಉಳುಮೆ ಮಾಡಲು ಮತ್ತು ಸರ್ಕಾರದಿಂದ ನೀಡಿದ ಸಾಗುವಳಿ ಪತ್ರ ಇದೆ. ನಮ್ಮ ಹತ್ತಿರ ಮೂಲ ದಾಖಲೆಗಳು ಇದ್ದರೂ ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯದಿಂದ ಕಾಡು ಪ್ರಾಣಿಗಳು ನಮ್ಮ ಜಮೀನಿಗೆ ಬರಬಾರದು. ನಾವುಗಳು ನಿಮ್ಮ ಕಾಡಿನ ಒಳಗಡೆಗೆ ಜಾನುವಾರುಗಳು ಮೇಯಿಸಲು ಬಂದರೆ ನಮ್ಮ ಮೇಲೆ ದೂರು ದಾಖಲಿಸಲು ಮಾಡುತ್ತೀರ. ಅದರ ಜತೆಯಲ್ಲಿ ಜಾನುವಾರುಗಳನ್ನು ನಿಮ್ಮ ಕಚೇರಿಗೆ ಓಡಿಸಿಕೊಂಡು ಹೋಗುತ್ತಿರಾ. ನಿಮ್ಮ ಕಾಡಿನಿಂದ ಪ್ರಾಣಿಗಳು ಬಂದರೆ ನಾವು ಏನೂ ಮಾಡಬೇಕು ಎಂದು ತರಾಟೆ ತೆಗೆದುಕೊಂಡರು ಈ ಸಂದರ್ಭ ವಾಗ್ವಾದ ನಡೆಯಿತು.
ಸಭೆಯಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯ ಪ್ರಭುಸ್ವಾಮಿ, ಶಿವಶಂಕರ್, ಅರಣ್ಯಾಧಿಕಾರಿ ವಿವೇಕ್, ಹನುಮಂತರಾಜು, ಉಪತಹಸೀಲ್ದಾರ್ ಸುನೀಲ್, ರವಿಚಂದ್ರ ಇದ್ದರು.