ಬಿಡದಿ: ಭದ್ರಾಪುರ ಗ್ರಾಮಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಶುಕ್ರವಾರ ಭೇಟಿ ನೀಡಿ ಮೃತ ಬಾಲಕಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಬಾಲಕಿ ಶವದ ಮರಣೋತ್ತರ ಪರೀಕ್ಷೆ ಹಾಗೂ ಎ್.ಎಸ್.ಎಲ್ ವರದಿಯಲ್ಲಿ ಯಾವುದೇ ಶಂಕೆಗಳಿಲ್ಲ. ರೈಲು ಗುದ್ದಿದ ಪರಿಣಾಮ ಬಾಲಕಿ ಮೃತಪಟ್ಟಿದ್ದಾಳೆ ಎಂದು ಬಾಲಕಿ ಕುಟುಂಬಕ್ಕೆ ತಿಳಿಸಿದರು. ಅಲ್ಲದೇ
ಕುಟುಂಬದ ನಿರ್ವಹಣೆ ಕಷ್ಟಕರವಾಗಿದ್ದು, ಮಗನಿಗೆ ಕೆಲಸ ಕೊಡಿಸಿ ಎಂಬ ಬಾಲಕಿ ತಾಯಿಯ ಮನವಿಗೆ ಸ್ಪಂದಿಸಿದ ನಾಗಲಕ್ಷ್ಮೀ ಅವರು, ಸ್ಥಳದಲ್ಲೇ ಅಪರ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಯುವಕನಿಗೆ ಯಾವುದಾದರು ಇಲಾಖೆಯಲ್ಲಿ ಅರೆಕಾಲಿಕ ಕೆಲಸ ಕೊಡಿಸುವಂತೆ ತಿಳಿಸಿದರು.
ಅಧಿಕಾರಿಗಳ ವಿರುದ್ಧ ಗರಂ
ಡಾ.ನಾಗಲಕ್ಷ್ಮೀ ಅವರು ಗ್ರಾಮಕ್ಕೆ ಬಂದ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಹೊರತು ಪಡಿಸಿ ಬೇರೆ ಯಾವ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲ. ಸ್ಥಳಕ್ಕೆ ಆಗಮಿಸದ ಅಧಿಕಾರಿಗಳ ವಿರುದ್ಧ ಅಧ್ಯಕ್ಷರು ಗರಂ ಆಗಿದ್ದರು. ಕೆಲ ಸಮಯದ ಬಳಿಕ ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆ ತಗೆದುಕೊಂಡರು.
ಗ್ರಾಮದ ಸ್ವಚ್ಛತೆಗೆ ಬೇಸರ
ಬಾಲಕಿ ಮನೆಗೆ ತೆರಳಿ ಸಾಂತ್ವನ ಹೇಳಿ ಬರುತ್ತಿದ್ದ ಆಯೋಗದ ಅಧ್ಯಕ್ಷರಿಗೆ ಗ್ರಾಮಸ್ಥರು, ಗ್ರಾಮದಲ್ಲಿ ಸ್ವಚ್ಛತೆ ಇಲ್ಲ ಎಂದು ಗಮನ ಸೆಳೆದರು. ಕೂಡಲೇ ಗ್ರಾಮದ ರಸ್ತೆ, ಚರಂಡಿಗಳನ್ನು ವೀಕ್ಷಿಸಿದ ನಾಗಲಕ್ಷ್ಮೀ, ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿರುವುದನ್ನು ಕಂಡು ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿ, ಕಸವನ್ನು ವಿಲೇವಾರಿ ಮಾಡುವಂತೆ ತಾಕೀತು ಮಾಡಿದರು.
ಹಕ್ಕು ಪತ್ರಕ್ಕೆ ಮನವಿ
ಗ್ರಾಮದಲ್ಲಿ ಹಕ್ಕಿ ಪಿಕ್ಕಿ ಸಮುದಾಯದ ಜನರೇ ಹೆಚ್ಚಾಗಿ ವಾಸವಿದ್ದು, ನಮಗೆ ಹಕ್ಕು ಪತ್ರ ಇಲ್ಲ ಎಂದು ಗ್ರಾಮಸ್ಥರು ಮಹಿಳಾ ಆಯೋಗದ ಅಧ್ಯಕ್ಷರ ಗಮನಕ್ಕೆ ತಂದರು. ಈ ವೇಳೆ ಮಾತನಾಡಿದ ಅಧ್ಯಕ್ಷೆ ನಾಗಲಕ್ಷ್ಮೀ ಅವರು, ಅರಣ್ಯ ಇಲಾಖೆಯ ಜಾಗದಲ್ಲಿ ಕೆಲವರು ಮನೆ ನಿರ್ಮಿಸಿಕೊಂಡಿದ್ದರೆ ಅವರಿಗೆ ಹಕ್ಕುಪತ್ರ ಸಿಗುವುದಿಲ್ಲ ಎಂಬುದು ನನ್ನ ಗಮನದಲ್ಲಿದೆ. ಈ ವಿಷಯವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದರು. ಬಿಡದಿ ಠಾಣೆ ಸಿಪಿಐ ಶಂಕರ್ ನಾಯಕ್, ಉಪ ತಹಸೀಲ್ದಾರ್ ಮಲ್ಲೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಕುಮಾರ್, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಜನಿ ಇದ್ದರು.