Condolences to the families of those who lost their lives on the streets  
ಜಿಲ್ಲೆ

ಬೀದಿಗೆ ಬಿದ್ದ ಕುಟುಂಬಸ್ಥರಿಗೆ ಸಾಂತ್ವಾನ

ಮಹಾಲಿಂಗಪುರ: ಪಟ್ಟಣದ ಕೆಂಗೇರಿಮಡ್ಡಿಯ 13ನೇ ವಾರ್ಡ್‌ನಲ್ಲಿ ಅಕ್ರಮವಾಗಿ ನಿರ್ಮಿಸಲಾದ ಶೆಡ್‌ಗಳನ್ನು ಕಳೆದ ಮಂಗಳವಾರ ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ ನೇತೃತ್ವದಲ್ಲಿ ತೆರವುಗೊಳಿಸಿದ್ದರಿಂದ ಬೀದಿಗೆ ಬಿದ್ದು ಗೋಳಾಡುತ್ತಿರುವ ಕುಟುಂಬದವರನ್ನು ಶನಿವಾರ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಭೇಟಿ ಮಾಡಿದರು.

ಅಲ್ಲಿಯ ನಿವಾಸಿಗಳು, ನಮಗೆ ಶೆಡ್ ತೆರವುಗೊಳಿಸುವ ಕುರಿತು ನೋಟಿಸ್ ನೀಡಿಲ್ಲ. ಜೆಸಿಬಿಯೊಂದಿಗೆ ಆಗಮಿಸಿದ ಅಧಿಕಾರಿಗಳಿಗೆ 3-4 ತಾಸು ಸಮಯ ಕೊಡಿ ಮನೆಯಲ್ಲಿನ ವಸ್ತುಗಳನ್ನು ಬೇರೆಡೆ ಇಡುತ್ತೇವೆ ಎಂದರೂ ಕರುಣೆ ತೋರದೆ ಮನೆಯಲ್ಲಿದ್ದ ಚಿಕ್ಕ ಮಕ್ಕಳನ್ನು ಹೊರಗಡೆ ಎಳೆದು ನಮ್ಮ ವಸ್ತುಗಳ ಸಮೇತ ಶೆಡ್‌ಗಳನ್ನು ಸರ್ವನಾಶ ಮಾಡಿದರು ಎಂದು ನೋವು ಹೇಳಿಕೊಂಡರು.

ಈಗ ನಾವು ರಸ್ತೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡುತ್ತಿದ್ದೇವೆ. ಶಾಲೆಯಲ್ಲಿ ವಾಸವಿದ್ದೇವೆ. ನಮ್ಮ ಬದುಕನ್ನು ಕಸಿಯಲಾಗಿದೆ. ಚುನಾವಣೆ ಬಂದಾಗ ಕೈಮುಗಿದು ನಿಲ್ಲುವ ನಾಯಕರ‌್ಯಾರು ನಮ್ಮ ಕಡೆ ತಿರುಗಿ ನೋಡಿಲ್ಲ. ನಮ್ಮ ಗೋಳಾಟ ಕೇಳುವವರಿಲ್ಲ. ಇಂತಹ ಪರಿಸ್ಥಿತಿ ನಮ್ಮ ವೈರಿಗೂ ಬರಬಾರದು ಎಂದು ಕಣ್ಣೀರು ಹಾಕಿದರು.

ಅಷ್ಟೊಂದು ದೂರದಿಂದ ನೀವು ಬಂದು ನಮ್ಮ ಕಷ್ಟದ ಪರಿಸ್ಥಿತಿ ಆಲಿಸುತ್ತಿದ್ದೀರಿ. ಇದರಿಂದ ನಮಗೆ ಸ್ವಲ್ಪ ಆಸೆ ಕುದುರಿದೆ. ಹೇಗಾದರೂ ಮಾಡಿ ನಮಗೆ ಜಾಗ ಸಿಗುವಂತೆ ಮಾಡಿ ಎಂದು ಕಣ್ಣೀರಿಟ್ಟು, ವೀಣಾ ಅವರ ಕಾಲು ಹಿಡಿದು ಬೇಡಿಕೊಂಡರು. ಇನ್ನು ಹಲವರು ಏಕಾಏಕಿ ಶೆಡ್ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಿರಾಶ್ರೀತರ ಗೋಳು ಆಲಿಸಿದ ವೀಣಾ ಕಾಶಪ್ಪನವರ, ನಿಮ್ಮಲ್ಲಿ ಅನೇಕರು ವಯಸ್ಸಿನಲ್ಲಿ ನನಗಿಂತ ಹಿರಿಯರು ಇದ್ದೀರಿ. ನೀವು ನನ್ನ ಕಾಲು ಹಿಡಿಯಬಾರದು. ನೀವು ಆಶೀರ್ವಾದ ಮಾಡಬೇಕು. ನಿಮಗೆ ಆಗಿರುವ ಅನ್ಯಾಯದ ಕುರಿತು ಈಗಾಗಲೇ ಕಂದಾಯ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಜತೆಗೆ ಮಾತನಾಡಿದ್ದೇನೆ. ಸರ್ಕಾರಿ ಶಾಲೆಯಲ್ಲಿ ವಸತಿಗೆ ವ್ಯವಸ್ಥೆ ಮಾಡುವಂತೆ ನಾನು ಅಂದೇ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ಈಗ 2-3 ದಿನ ಸರ್ಕಾರಿ ರಜೆ ಇರುವುದರಿಂದ ಮಂಗಳವಾರ ಅಧಿಕಾರಿಗಳು ನಿಮ್ಮ ಕಡೆ ಗಮನ ಹರಿಸಿ ಏನಾದರೂ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಇದರ ಕುರಿತು ಜಿಲ್ಲಾಧಿಕಾರಗಳೊಂದಿಗೂ ಮಾತನಾಡಿದ್ದೇನೆ. ಅವರೂ ಶೆಡ್ ತೆರವುಗೊಳಿಸಲು ತಿಳಿಸಿಲ್ಲ ಎಂದಿದ್ದಾರೆ. ವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಇಬ್ಬರೂ ಮಹಿಳೆಯರೇ ಇದ್ದಾರೆ. ಅವರು ನಿಮ್ಮಂತಹ ಮಹಿಳೆಯರ ದು:ಖ ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಂಬಿದ್ದೇನೆ ಎಂದರು.

ನನ್ನ ವಾಸಸ್ಥಾನ ದೂರ ಇರಬಹುದು. ಆದರೆ, ನನ್ನ ಮನಸ್ಸು ಇಲ್ಲೇ ಇರುತ್ತದೆ. ನಿಮಗೆ ಪರ್ಯಾಯ ವ್ಯವಸ್ಥೆ ಆಗುವರೆಗೂ ನನಗೆ ಸಮಾಧಾನ ಇರವದಿಲ್ಲ. ಒಂದು ವೇಳೆ ವ್ಯವಸ್ಥೆ ಮಾಡದಿದ್ದರೆ ನಾನೂ ಹೋರಾಟಕ್ಕೂ ಸಿದ್ಧ ಎಂದು ಅಭಯ ನೀಡಿದರು.

ಶೆಡ್ ಅನಧಿಕೃತವಾಗಿದ್ದರೆ ನಿವಾಸಿಗಳಿಗೆ ಮುಂಚಿತವಾಗಿ ತಿಳಿಸಿ ಸಮಯ ನೀಡಿ ತೆರವುಗೊಳಿಸಬೇಕಾಗಿತ್ತು. ಏಕಾಏಕಿ ತೆರವುಗೊಳಿಸಬಾರದಿತ್ತು. ಶಾಸಕ ಸಿದ್ದು ಸವದಿ ಅವರ ಪ್ರತಿಕ್ರಿಯೆಯನ್ನು ಮಾಧ್ಯಮದಲ್ಲಿ ನೋಡಿದೆ. ಅವರು ಇಲ್ಲಿಯ ನಿವಾಸಿಗಳ ಕುರಿತು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾಗಿತ್ತು ಎಂದರು.

ಇಲ್ಲಿ ಜನತೆ ಬೀದಿಗೆ ಬಿದ್ದಿದ್ದಾರೆ. ಆದರೆ ಶಾಸಕರು ವಿದೇಶ ಪ್ರವಾಸದಲ್ಲಿದ್ದಾರೆ. ಇದು ಸರಿಯೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ತಪ್ಪು ಎಂದರು.