ಜಿಲ್ಲೆ

ಮಾನ್ಸೂನ್​ ಪ್ರವೇಶಕ್ಕೆ ಅನುಕೂಲಕರ ವಾತಾವರಣ: 4 ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​​​

ಬೆಂಗಳೂರು: ವಾಯುಭಾರ ಕುಸಿತದಿಂದ ಉಡುಪಿ, ಕಲಬುರಗಿ, ಹಾಸನ ಮತ್ತು ಮೈಸೂರು ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಬುಧವಾರವೂ ವರುಣಾರ್ಭಟ ಮುಂದುವರಿದಿದೆ.

ಉತ್ತರ ಕರ್ನಾಟಕ, ಗೋವಾ ಕರಾವಳಿಯ ಪೂರ್ವ-ಮಧ್ಯ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮೇ 22ರಂದು ತೀವ್ರ ವಾಯುಭಾರ ಕುಸಿತವಾಗಿ ಪರಿವರ್ತನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ 6-7 ದಿನ ಗುಜರಾತ್​, ಕೊಂಕಣ, ಗೋವಾ, ಕರ್ನಾಟಕ ಮತ್ತು ಕೇರಳ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕೇರಳಕ್ಕೆ ಮಾರುತ ಪ್ರವೇಶಿಸಲು ಮುಂದಿನ 4 ದಿನ ಅನುಕೂಲಕರ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುನ್ಸೂಚನೆ ಕೊಟ್ಟಿದೆ.

ಉತ್ತರ ಕನ್ನಡದಲ್ಲಿ ಗುರುವಾರ(ಮೇ 22) ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್​ ಅಲರ್ಟ್​​​ ಕೊಟ್ಟಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮುಂದಿನ 5 ದಿನ ಹಾಗೂ ಬೆಳಗಾವಿ, ಧಾರವಾಡದಲ್ಲೂ ಮೇ 22ರಂದು ಬಿರುಸಾಗಿ ವರ್ಷಧಾರೆಯಾಗುವುದರಿಂದ ಆರೆಂಜ್​ ಅಲರ್ಟ್​ ನೀಡಲಾಗಿದೆ.

ಬೀದರ್​, ಕಲಬುರಗಿ, ವಿಜಯಪುರ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಮುಂದಿನ 24 ಗಂಟೆ ಹಾಗೂ ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಗದಗ, ಹಾವೇರಿಯಲ್ಲಿ ಮೇ 24ರಂದು ಯೆಲ್ಲೋ ಅಲರ್ಟ್ ಇರಲಿದೆ. ದಕ್ಷಿಣ ಕರ್ನಾಟಕ ವ್ಯಾಪ್ತಿಯ ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಡೆ ಮುಂದಿನ 5 ದಿನ ಅಷ್ಟೊಂದು ಮಳೆ ಇರುವುದಿಲ್ಲ. ಹಲವು ಜಿಲ್ಲೆಗಳಲ್ಲಿ 2-3 ಡಿ.ಸೆ. ಉಷ್ಣಾಂಶ ಕುಸಿತವಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.