ಶಿವಮೊಗ್ಗ: ಬಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ನಾಲ್ವರನ್ನು ಬಂಧಿಸಿ, 12 ಜನರನ್ನು ವಶಕ್ಕೆ ಪಡೆಯಲಾಗಿದೆ. ಈವರೆಗೆ ಬಂಧಿತರ ಸಂಖ್ಯೆ ಆರಕ್ಕೆ ಏರಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಶುಕ್ರವಾರ ಬೆಳಗ್ಗೆವರೆಗೆ ಶಿವಮೊಗ್ಗ ನಗರದಲ್ಲಿ ಕರ್ಫ್ಯೂ ಮುಂದುವರಿಸಲಾಗಿದ್ದು, 2 ದಿನ ನಗರದ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೊಷಣೆ ಮಾಡಲಾಗಿದೆ. ಸೋಮವಾರ ರಾತ್ರಿ ಮತ್ತು ಮಂಗಳವಾರ ನಸುಕಿನಲ್ಲಿ ಮೂರು ಆಟೋ ರಿಕ್ಷಾ, ಮನೆಯ ಮುಂದೆ ನಿಲ್ಲಿಸಿದ್ದ ಎರಡು ಬೈಕ್ಗಳಿಗೆ ಬೆಂಕಿ ಹಚ್ಚಲಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ. ಹತ್ಯೆ ಪ್ರಕರಣದ ಈವರೆಗಿನ ತನಿಖೆ ಪ್ರಗತಿಯನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಎಸ್ಪಿ ಬಿ.ಎಂ. ಲಕ್ಷ್ಮೀಪ್ರಸಾದ್, ಮೇಲ್ನೋಟಕ್ಕೆ ಹಳೇ ದ್ವೇಷದಂತೆ ಕಂಡುಬಂದರೂ ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದರು.
ಬಂಧಿತರಲ್ಲಿ ಮಹಮ್ಮದ್ ಖಾಸಿಫ್ ಮತ್ತು ಸೈಯದ್ ನದೀಂರನ್ನು ಸೋಮವಾರವೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಂತರ ಬಂಧಿಸಲ್ಪಟ್ಟ ರಿಹಾನ್ ಶರೀಫ್, ಉಲ್ಲಾಖಾನ್, ಅಬ್ದುಲ್ ಅಫನ್, ನಿಹಾನ್ರನ್ನು ಮಂಗಳವಾರ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ. ಖಾಸಿಫ್ ಮತ್ತು ನದೀಂನನ್ನು ಶಿವಮೊಗ್ಗದಲ್ಲಿ, ಇತರ ನಾಲ್ವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಆರೋಪಿಗಳೆಲ್ಲರೂ 21ರಿಂದ 22ರ ವಯೋಮಿತಿಯವರು. ಖಾಸಿಫ್ ಮಾತ್ರ 30 ವರ್ಷದವನು. ಐವರು ನೇರವಾಗಿ ಹತ್ಯೆಯಲ್ಲಿ ಭಾಗಿಯಾಗಿದರೆ ಅಬ್ದುಲ್ ಅಫನ್ ಹಂತಕರಿಗೆ ತಪ್ಪಿಸಿಕೊಳ್ಳಲು ನೆರವಾಗಿರುವುದು ಪ್ರಾಥಮಿಕ ವರದಿಯಲ್ಲಿ ದೃಢಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾದ ಆರೋಪದಲ್ಲಿ ಇನ್ನೂ 12 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅವರೂ ಕೊಲೆಯಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಸಾಬೀತಾದರೆ ಬಂಧಿಸಲಾಗುವುದು ಎಂದು ಎಸ್ಪಿ ಹೇಳಿದರು.
ಹರ್ಷನ ಮೇಲಿತ್ತು ಎರಡು ಕೇಸ್: ಮೃತ ಹರ್ಷನ ಮೇಲೂ ಎರಡು ಪ್ರಕರಣಗಳು ದಾಖಲಾಗಿದ್ದವು. ಆದರೆ ಆತ ರೌಡಿಶೀಟರ್ ಆಗಿರಲಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದರು.
‘ನೋಡಿ, ಅಲ್ಲಿ ನನ್ನ ತಮ್ಮ ಹೆಣವಾಗಿ ಬಿದ್ದಿದ್ದಾನೆ. ಇದೆಲ್ಲ ಬೇಕಾ? ನಾನು ಎಲ್ಲರಲ್ಲೂ ಬೇಡಿಕೊಳ್ತೇನೆ, ಅಪ್ಪ -ಅಮ್ಮಗೆ ಒಳ್ಳೆಯ ಮಕ್ಕಳಾಗಿ ಬಾಳಿ.. ಹಿಂದು ಮತ್ತು ಮುಸ್ಲಿಂ ಸಮಾಜದ ಪ್ರತಿಯೊಬ್ಬ ಯುವಕರಲ್ಲೂ ನನ್ನ ಪ್ರಾರ್ಥನೆ ಇಷ್ಟೇ.. ದಯವಿಟ್ಟು ಇಂಥದ್ದನ್ನೆಲ್ಲ್ಲ ಬಿಟ್ಟು ಬಿಡಿ. ಒಳ್ಳೆಯ ಮಕ್ಕಳಾಗಿ ಇರಿ ಎಂದು ಕೈ ಮುಗಿದು ಬೇಡಿಕೊಳ್ತೇನೆ..’ ಇವು ಹತ್ಯೆಗೀಡಾಗಿರುವ ಹರ್ಷನ ಸಹೋದರಿ ಪತ್ರಕರ್ತರ ಬಳಿ ಪ್ರತಿಕ್ರಿಯೆ ನೀಡುವಾಗ ಹೇಳಿದ ಮಾತುಗಳು. ‘ನನ್ನ ಮಗ ಹರ್ಷನನ್ನು ಭಾರತಾಂಬೆಗೆ ಅರ್ಪಿಸಿದ್ದೇನೆ. ನಿನ್ನೆವರೆಗೆ ನನ್ನ ಮಗ ಯಾರು ಎಂಬುದು ಜನರಿಗೆ ಗೊತ್ತಿರಲಿಲ್ಲ. ಆದರೆ ಇಂದು ಇಡೀ ದೇಶಕ್ಕೆ ಹರ್ಷ ಯಾರು ಎಂಬುದು ಗೊತ್ತಾಗಿದೆ. ಮಗನನ್ನು ಕಳೆದುಕೊಂಡ ನೋವಿದ್ದರೂ ಅವನ ಬಗ್ಗೆ ಹೆಮ್ಮೆ ಇದೆ’ ಎಂದು ಹರ್ಷನ ತಾಯಿ ಹೇಳಿದ್ದಾರೆ.
ಶಾಂತಿಯುತವಾಗಿದ್ದ ರಾಜ್ಯ ಹಿಜಾಬ್, ಕೇಸರಿ ಶಾಲು ಹಾಗೂ ಶಿವಮೊಗ್ಗದಲ್ಲಿ ಯುವಕನೊಬ್ಬನ ಕೊಲೆ ಕಾರಣ ಕುದಿಯುವ ಕುಲುಮೆಯಾಗಿದೆ. ರಾಜ್ಯದಲ್ಲಿ ಶಾಂತಿ ಭದ್ರತೆಗೆ ದೊಡ್ಡ ಅಪಾಯ ಎದುರಾಗಿದ್ದು, ರಾಜ್ಯ ಸರ್ಕಾರವನ್ನು ವಜಾ ಮಾಡುವ ಪರಿಸ್ಥಿತಿ ಉದ್ಭವಿಸಿರುವುದರಿಂದ ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು. ಈ ಹಿನ್ನೆಲೆಯಲ್ಲಿ ಶೀಘ್ರವೇ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಲಾಗುವುದು. | ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ ಕಳೆದ 3 ದಿನಗಳಲ್ಲಿ ಶಿವಮೊಗ್ಗದಲ್ಲಿ 3 ಕೊಲೆ ನಡೆದಿವೆ. ಶಿವಮೊಗ್ಗ ಗೃಹ ಸಚಿವರ ತವರು ಜಿಲ್ಲೆ. ಅಲ್ಲೇ ಈ ರೀತಿ ಕೊಲೆಗಳು ನಿರಂತರವಾಗಿ ನಡೆಯುತ್ತವೆ ಎಂದರೆ ಹೇಗೆ? 144 ಸೆಕ್ಷನ್ ಜಾರಿಯಾಗಿ ದ್ದರೂ ಮೃತನ ಶವಯಾತ್ರೆ ಪೊಲೀಸ್ ಇಲಾಖೆ ಅವಕಾಶ ನೀಡಿದ್ದು ಹೇಗೆ? ಈ ಮೆರವಣಿಗೆ ಯಲ್ಲಿ ಈಶ್ವರಪ್ಪ ಮುಂದೆ ನಿಂತಿದ್ದಾರೆ ಎಂದರೆ ಇದು ನಾಗರಿಕ ಸರ್ಕಾರವಾ? ಪಿಎಫ್ಐ ಮತ್ತು ಎಸ್ಡಿಪಿಐ ವಿರುದ್ಧ ಸಾಕ್ಷ್ಯಗಳು ಇದ್ದರೆ ಕೂಡಲೇ ಆ ಸಂಘಟನೆಗಳನ್ನು ನಿಷೇಧ ಮಾಡಲು ಕ್ರಮಕೈಗೊಳ್ಳಲಿ. | ಸಿದ್ದರಾಮಯ್ಯ ಮಾಜಿ ಸಿಎಂ ಹರ್ಷ ಹತ್ಯೆಯನ್ನು ಕೇವಲ ಕೊಲೆ ಪ್ರಕರಣವೆಂದು ಭಾವಿಸದೆ ಭಯೋತ್ಪಾದಕ ಕೃತ್ಯ ಎಂದೇ ಪರಿಗಣಿಸಬೇಕು. ಬಂಧಿತರ ಹಿಂದೆ ಬೇರೆಯವರೇ ಇದ್ದಾರೆ. ಸಂಚು ರೂಪಿಸಿದವರನ್ನು ಬಯಲಿಗೆಳೆಯಬೇಕು. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ತನಿಖಾ ದಳದ ಮಾದರಿಯಲ್ಲಿ ರಾಜ್ಯದಲ್ಲಿ ಪ್ರತ್ಯೇಕ ತನಿಖಾ ದಳ ಸ್ಥಾಪಿಸಬೇಕು. | ತೇಜಸ್ವಿ ಸೂರ್ಯ ಸಂಸದ ರಾಜ್ಯದಲ್ಲಿ ಕೆಲವು ಮತೀಯ ಶಕ್ತಿಗಳು ಹಿಂದು ಯುವಕರನ್ನು ಗುರಿಯಾಗಿಟ್ಟುಕೊಂಡು ಕಗ್ಗೊಲೆ ಮಾಡುವಂತಹ ಹೀನ ಕೃತ್ಯ ನಡೆಸುತ್ತಿದ್ದಾರೆ. ಸಮಾಜದಲ್ಲಿ ಆತಂಕ ಸೃಷ್ಟಿಸಿ ಕೋಮುಸೌಹಾರ್ದತೆಗೆ ಧಕ್ಕೆ ಸಮಾಜಘಾತುಕ ಶಕ್ತಿಗಳ ವಿರುದ್ಧ ಎನ್ಕೌಂಟರ್ ಸರಿಯಾದ ಕ್ರಮ. | ಎಂ.ಪಿ.ರೇಣುಕಾಚಾರ್ಯಶಾಸಕ
ಯುವ ಮೋರ್ಚಾದಿಂದ 5 ಲಕ್ಷ ರೂ.: ಹರ್ಷನ ಕುಟುಂಬಕ್ಕೆ ಬಿಜೆಪಿ ಯುವ ಮೋರ್ಚಾ ಆರ್ಥಿಕ ನೆರವು ನೀಡಿದೆ. ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ಹರ್ಷನ ನಿವಾಸಕ್ಕೆ ಆಗಮಿಸಿದ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಕೆ.ಸಿ.ಸಂದೀಪ್ಕುಮಾರ್, ಕುಟುಂಬದವರಿಗೆ ಸಾಂತ್ವನ ಹೇಳಿ ಐದು ಲಕ್ಷ ರೂ. ಮೊತ್ತದ ನೆರವಿನ ಚೆಕ್ ನೀಡಿದರು. ಕರಾವಳಿ ಭಾಗದ ಶಾಸಕರು ವೈಯಕ್ತಿಕ ನೆಲೆಯಲ್ಲಿ ಆರ್ಥಿಕ ನೆರವಿನ ಹಸ್ತ ಚಾಚಿದ್ದಾರೆ.