ಮಳವಳ್ಳಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಗುರುವಾರ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಮಧು ಅವರು ತಹಸೀಲ್ದಾರ್ ಡಾ.ಲೋಕೇಶ್ ಅವರ ಮೂಲಕ ಸಿಎಂ ಮತ್ತು ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು. ನಿರಂಜನ್ ಮೂರ್ತಿ, ಪುನೀತ್, ಶಿವಪ್ಪ, ಉಸ್ಮಾನ್ ಇದ್ದರು. 
ಜಿಲ್ಲೆ

ಗ್ರಾಮ ಆಡಳಿತ ಅಧಿಕಾರಿಗಳ ಮೇಲಿನ ದೌರ್ಜನ್ಯಕ್ಕೆ ಖಂಡನೆ

ಮಳವಳ್ಳಿ: ಚಿಕ್ಕಮಗಳೂರು ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ಅಲ್ಲಿನ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಯಿಂದ ಆಗುತ್ತಿರುವ ದೌರ್ಜನ್ಯ ಖಂಡಿಸಿ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಿಗೆ ಗುರುವಾರ ತಹಸೀಲ್ದಾರ್ ಡಾ.ಲೋಕೇಶ್ ಮೂಲಕ ಮನವಿ ಸಲ್ಲಿಸಲಾಯಿತು.

ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಮಧು ನೇತೃತ್ವದಲ್ಲಿ ಪದಾಧಿಕಾರಿಗಳ ತಂಡ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಎಂ.ಮಧು ಮಾತನಾಡಿ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮತ್ತು ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ಅವರು ಜಿಲ್ಲೆಯ 29 ಗ್ರಾಮ ಆಡಳಿತ ಅಧಿಕಾರಿಗಳಿಗೆ ಒಂದು ವರ್ಷದ ವೇತನ ಬಡ್ತಿ ಕಡಿತದ ದಂಡನೆ ವಿಧಿಸಿ ಆದೇಶ ನೀಡಿದ್ದಾರೆ. ಜ.24 ರಂದು ನಡೆಸಿದ ಸಭೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಕರ್ತವ್ಯದ ವಿವಿಧ ಲೋಪಗಳ ಆರೋಪಗಳು ಕೇಳಿಬಂದ ಬಗ್ಗೆ ಪರಾಮರ್ಶಿಸದೆ ಈ ಕ್ರಮ ಜರುಗಿಸಿರುವುದು ಅಧಿಕಾರಿಗಳ ಮೇಲೆ ನಡೆಸಿದ ದೌರ್ಜನ್ಯವಾಗಿದೆ ಎಂದ ಅವರು, ಆರೋಪಗಳಿಗೆ ಅಧಿಕಾರಿಗಳನ್ನು ವಿಚಾರಣೆ ಅಥವಾ ಯಾವುದೇ ತಿಳಿವಳಿಕೆ ನೀಡದೆ ಏಕಾಏಕಿ ಸಂಚಿತ ಪರಿಣಾಮ ರಹಿತವಾಗಿ ವೇತನ ಬಡ್ತಿ ಕಡಿತಗೊಳಿಸಿರುವ ಕ್ರಮ ಸರಿಯಲ್ಲ ಎಂದರು.

ಈ ವಿಚಾರವಾಗಿ ನಮ್ಮ ರಾಜ್ಯ ಕೇಂದ್ರ ಸಂಘದ ವತಿಯಿಂದ ಜಂಟಿ ಕಾರ್ಯಕಾರಿಣಿ ಗೂಗಲ್ ಸಭೆ ನಡೆಸಿದ್ದು, ಅಲ್ಲಿನ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳು ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ತೆಗೆದುಕೊಂಡಿರುವ ಕ್ರಮವನ್ನು ವಿರೋಧಿಸಿ ಮತ್ತು ದೌರ್ಜನ್ಯವನ್ನು ಖಂಡಿಸಲಾಗಿದೆ. ಕೂಡಲೇ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಅವರನ್ನು ವರ್ಗಾವಣೆ ಮಾಡುವುದರ ಜತೆಗೆ ಅವರು ಮಾಡಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮ ಆಡಳಿತ ಅಧಿಕಾರಿಗಳಾದ ನಿರಂಜನ್ ಮೂರ್ತಿ, ಪುನೀತ್, ಶಿವಪ್ಪ, ಉಸ್ಮಾನ್ ಸೇರಿದಂತೆ ಹಲವರಿದ್ದರು.