ಜಿಲ್ಲೆ

ಅನಧಿಕೃತ ಟ್ಯಾಕ್ಸಿಯಾಗಿ ಬೈಕ್ ಬಳಕೆಗೆ ಖಂಡನೆ

ಮೈಸೂರು: ವೈಟ್ ಬೋರ್ಡ್ ಬೈಕ್‌ಗಳನ್ನು ಅನಧಿಕೃತ ಟ್ಯಾಕ್ಸಿಯಾಗಿ ಉಪಯೋಗಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನೆಯಿಂದ ನಗರದಲ್ಲಿ ಮಂಗಳವಾರ ಆಟೋ ರಿಕ್ಷಾ ರ‌್ಯಾಲಿ ನಡೆಯಿತು.

ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಮಾವೇಶಗೊಂಡ ಆಟೋ ರಿಕ್ಷಾ ಚಾಲಕರು ಜಿಲ್ಲಾಧಿಕಾರಿ ಕಚೇರಿವರೆಗೆ ರ‌್ಯಾಲಿ ನಡೆಸಿ ಬೈಕ್‌ಗಳನ್ನು ಟ್ಯಾಕ್ಸಿಯಾಗಿ ಬಳಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ವೈಟ್‌ಬೋರ್ಡ್ ಎಲೆಕ್ಟ್ರಿಕ್ ಬೈಕ್ ಹಾಗೂ ಕಾರುಗಳನ್ನು ಟ್ಯಾಕ್ಸಿಯಾಗಿ ಬಳಸಲಾಗುತ್ತಿದೆ. ಇದರಿಂದ ಆಟೋ ಚಾಲಕರಿಗೆ ತೊಂದರೆಯಾಗುತ್ತಿದೆ. ಆಟೋ ರಿಕ್ಷಾ ಚಲಾಯಿಸಲು ಅಥವಾ ಕೊಂಡುಕೊಳ್ಳಲು ಚಾಲನಾ ಪರವಾನಗಿಯೊಂದಿಗೆ ಬ್ಯಾಡ್ಜ್ ಕಡ್ಡಾಯವಾಗಬೇಕು ಎಂದು ಆಗ್ರಹಿಸಿದರು.

ಬೇರೆ ರಾಜ್ಯ ಹಾಗೂ ಬೇರೆ ಜಿಲ್ಲೆಯ ಪರ್ಮಿಟ್ ಹೊಂದಿರುವ ವಾಹನಗಳನ್ನು ಮೈಸೂರಿನಲ್ಲಿ ಬಾಡಿಗೆ ಮಾಡುವುದನ್ನು ನಿಲ್ಲಿಸಬೇಕು. ಮೈಸೂರು ನಗರದಲ್ಲಿ ಈಗಾಗಲೇ ವಾಹನಗಳ ಸಂಖ್ಯೆ ಮಿತಿ ಮೀರಿದೆ. ಹಾಗಿರುವಾಗ ಆಟೋ ರಿಕ್ಷಾಗಳಿಗೆ ಹೊಸದಾಗಿ ಪರ್ಮಿಟ್ ನೀಡಬಾರದು ಎಂದು ಒತ್ತಾಯಿಸಿದರು.

ದರ ಪರಿಷ್ಕರಣವಾಗಲಿ: ಮೈಸೂರು ನಗರ ಆಟೋರಿಕ್ಷಾ ಹಾಗೂ ಕ್ಯಾಬ್‌ಗಳ ಆನ್‌ಲೈನ್ ದರವನ್ನು ಸರ್ಕಾರದ ಮಾರ್ಗಸೂಚಿಯ ಅನ್ವಯ ಪರಿಷ್ಕೃತಗೊಳಿಸಬೇಕು. ಸರ್ಕಾರವೇ ಅಟೋ ಮತ್ತು ಕ್ಯಾಬ್ ಚಾಲಕರಿಗೆ ಒಂದು ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ನಗರದಲ್ಲಿ 20 ಕಿ.ಮೀ. ಅಂತರದ ಪರಿಮಿತಿ ಹೆಚ್ಚಿಸಬೇಕು. ಟಿಪಿಆರ್‌ಎಸ್ ಪ್ಯಾನಿಕ್ ಬಟನ್ ಕಾನೂನು ರದ್ದುಪಡಿಸಬೇಕು. ದಿನನಿತ್ಯ ಖಾಸಗಿ ಚಾಲಕರ ದುಡಿಮೆಗೆ ತೊಂದರೆಯಾಗುತ್ತಿರುವ ಕಾರಣ ಸಾಲ ಕಟ್ಟಲು ಮತ್ತು ಮಕ್ಕಳ ವಿದ್ಯಾಭ್ಯಾಸ, ಮನೆಯ ಬಾಡಿಗೆ ಮತ್ತು ನಿರ್ವಹಣೆಗೆ ಭಾರಿ ತೊಂದರೆ ಉಂಟಾಗುತ್ತಿದೆ. ಚಾಲಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹೀಗಾಗಿ ಬೇಡಿಕೆ ಈಡೇರಿಸಿ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.

ನಿಗಮ ಸ್ಥಾಪಿಸಿ: ಆಟೋ ರಿಕ್ಷಾ, ಕ್ಯಾಬ್, ಬಸ್ ಹಾಗೂ ಸರಕು ಸಾಗಣೆ ವಾಹನಗಳ ಚಾಲಕರ ನಿಗಮ ಮೈಸೂರಿನಲ್ಲಿ ಸ್ಥಾಪನೆ ಆಗಬೇಕು. ಚಾಲಕರಿಗೆ ಮೈಸೂರಿನಲ್ಲಿ ಅಗತ್ಯ ಸಮುದಾಯ ಭವನ ನಿರ್ಮಿಸಬೇಕು. ಚಾಲಕರಿಗೆ ಮನೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಮೈಸೂರು ನಗರ ಹಾಗೂ ಸುತ್ತಮುತ್ತ ಇರುವ ಪ್ರಮುಖ ಸ್ಥಳಗಳಲ್ಲಿ ಪ್ರೀಪೇಯ್ಡ್ ಆಟೋ ನಿಲ್ದಾಣ ಸ್ಥಾಪನೆ ಆಗಬೇಕು. ಯಾವುದೇ ರೀತಿಯ ವೈಟ್ ಬೋರ್ಡ್ ವಾಹನಗಳು ಬಾಡಿಗೆ ಸೇವೆಯನ್ನು ನಿಷೇಧಿಸಬೇಕು. ಈಗಾಗಲೇ ಇಂತಹ ವಾಹನಗಳಿಗೆ ನೀಡಲಾಗಿರುವ ಲೈಸನ್ಸ್ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಬಡ ಮಕ್ಕಳಿಗೆ ಸ್ಕಾಲರ್‌ಶಿಪ್ ನೀಡಬೇಕು: ಹೊರ ರಾಜ್ಯಗಳಿಂದ ಬರುವ ತೆರಿಗೆ ಕಟ್ಟದ ಬಸ್‌ಗಳನ್ನು ತಪಾಸಣೆ ಮಾಡಿ, ಅವುಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ನಗರದಿಂದ ಹೊರಗೆ ಬಾಡಿಗೆಗೆ ಹೋಗುವ ಕ್ಯಾಬ್‌ಗಳಿಗೆ ಸಂಬಂಧಪಟ್ಟಂತೆ ನಿಗದಿತ ದರ ಹಾಗೂ ಕಿ.ಮೀ. ನಿಗದಿಪಡಿಸಬೇಕು. ಬಡ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಕಾಲರ್‌ಶಿಪ್ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸಂಘದ ಅಧ್ಯಕ್ಷ ಎಂ.ಬಸವರಾಜು ಪಡುಕೋಟೆ, ಜಿಲ್ಲಾಧ್ಯಕ್ಷ ಮುರುಗನ್, ಪ್ರಧಾನ ಕಾರ್ಯದರ್ಶಿ ವಿನಾಯಕ, ಮುಖಂಡರಾದ ಚನ್ನೇಗೌಡ, ಮಂಜುನಾಥ್, ಶಿಲ್ಪಾ, ಚೇತನ್ ಇತರರು ಇದ್ದರು.