ಶಿವಮೊಗ್ಗ : ಸಣ್ಣ ವ್ಯಾಪಾರಸ್ಥರಿಗೆ ಬ್ಯಾಂಕ್ ವ್ಯವಹಾರ ಆಧರಿಸಿ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರ ನೋಟೀಸ್ ನೀಡಿರುವುದನ್ನು ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಂಯೋಜಕ ಎಸ್.ದತ್ತಾತ್ರಿ ಖಂಡಿಸಿದ್ದಾರೆ. ನೋಟಿಸ್ ಜಾರಿ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಇದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಮಾಡಿರುವ ಕುಂತಂತ್ರ ಎಂದು ದೂರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಮಾದರಿಯಲ್ಲಿ ಹಣದ ವ್ಯವಹಾರ ಜಾರಿಗೆ ತಂದರು. ಯುಪಿಐ ಪಾವತಿಯನ್ನು ಅನುಷ್ಟಾನಗೊಳಿಸಿದರು. ಇದರಿಂದ ಸಣ್ಣಪುಟ್ಟ ವ್ಯಾಪರಸ್ಥರು, ಬೀದಿ ಬದಿ ವ್ಯಾಪಾರಿಗಳು ಪ್ರತಿ ದಿನ ಬ್ಯಾಂಕ್ ಅಲೆಯುವ ಸಮಸ್ಯೆ ತಪ್ಪಿತು. ಚಿಲ್ಲರೆ ಸಮಸ್ಯೆಯೂ ನಿವಾರಣೆಯಾಯಿತು. ಹೀಗಾಗಿ ಹೆಚ್ಚು ಮಂದಿ ನಗದು ರಹಿತ ವಹಿವಾಟು ಅಳವಡಿಸಿಕೊಂಡಿದ್ದಾರೆ ಎಂದು ದತ್ತಾತ್ರಿ ತಿಳಿಸಿದ್ದಾರೆ.
ಈಗ ಸಣ್ಣ ವ್ಯಾಪಾರಿಗಳ ಬ್ಯಾಂಕ್ ವಹಿವಾಟಿನ ಆಧಾರದಲ್ಲಿ ನೋಟಿಸ್ ಜಾರಿ ಮಾಡಿದ್ದು ಜಿಎಸ್‌ಟಿ ನೋಂದಾಯಿಸಿಕೊಳ್ಳಿ. ತೆರಿಗೆ ಪಾವತಿ ಮಾಡಿ ಎಂದು ರಾಜ್ಯ ಸರ್ಕಾರ ಸೂಚಿಸುತ್ತಿರುವುದು ಅವೈಜ್ಞಾನಿಕವಾಗಿದೆ. ಇದರಿಂದ ವ್ಯವಹಾರಸ್ಥರಿಗೆ ತೊಂದರೆ, ಮಾನಸಿಕ ಕಿರುಕುಳ ಉಂಟಾಗುತ್ತಿದೆ. ನೋಟಿಸ್ ಜಾರಿ ಮಾಡಿರುವುದು ರಾಜ್ಯ ಸರ್ಕಾರ. ಆದರೆ ಕೇಂದ್ರ ಸರ್ಕಾರದ ಮೇಲೆ ಇದರ ತಪ್ಪು ಹೊರಿಸಲು ಕಾಂಗ್ರೆಸ್ ಹವಣಿಸುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.