ಜಿಲ್ಲೆ

ಸಾಗರೆ ಸಾಮಾಜಿಕ ಬಹಿಷ್ಕಾರ ಪ್ರಕರಣಕ್ಕೆ ಖಂಡನೆ

ಮೈಸೂರು: ಸರಗೂರು ತಾಲೂಕಿನ ಸಾಗರೆ ಗ್ರಾಮದ ಎಸ್.ಎಂ.ನಂಜೇಗೌಡ ಅವರ ಕುಟುಂಬಕ್ಕೆ ಕ್ಷುಲ್ಲಕ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಕರ್ನಾಟಕ ಪ್ರಜಾಪಾರ್ಟಿ (ರೈತ ಪರ್ವ) ಅಧ್ಯಕ್ಷ ಬಿ.ಶಿವಣ್ಣ ದೂರಿದರು.

ಈ ಕುರಿತು ಜಿಲ್ಲಾಧಿಕಾರಿ, ಎಸ್‌ಪಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ವಿಳಂಬ ಮಾಡಿದರೆ ಅಲ್ಲಿನ ಗ್ರಾ.ಪಂ ಕಚೇರಿ ಎದುರು ನಮ್ಮ ಪಕ್ಷದಿಂದ ಹೋರಾಟ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗ್ರಾಮದ ನಂಜೇಗೌಡ, ಇವರ ಕುಟುಂಬದ ದೊಡ್ಡತಾಯಮ್ಮ ಸತತವಾಗಿ ಸಾಗರೆ ಗ್ರಾಪಂ ಅಧ್ಯಕ್ಷರು, ಸದಸ್ಯರಾಗಿ ಜನರಿಗೆ ನೆರವಾಗಿದ್ದಾರೆ. ಇದನ್ನು ಗ್ರಾಮದ ಕೆಲ ಸಮುದಾಯ ಸಹಿಸುತ್ತಿಲ್ಲ. ಹೀಗಾಗಿ ನಂಜೇಗೌಡ ಅವರು ಮನೆ ನಿರ್ಮಿಸಿಕೊಂಡಿರುವ ಜಾಗ ಖರಾಬು ಎಂದು ಸುಳ್ಳು ಹೇಳುತ್ತ, 3 ತಿಂಗಳೊಳಗಾಗಿ ಮನೆ ಖಾಲಿ ಮಾಡಿ, ಜಾಗ ನೀಡಬೇಕು ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದರು. ಇದಕ್ಕೆ ನಂಜೇಗೌಡರು ಜಗ್ಗದಿದ್ದಾಗ ಈಗ ಇವರ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ಎಸ್‌ಪಿ, ತಹಸೀಲ್ದಾರರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸಂಬಂಧಿಸಿದವರು ಕ್ರಮ ಕೈಗೊಳ್ಳದಿದ್ದರೆ ಸಾಗರೆ ಗ್ರಾಪಂ ಎದುರು ಪ್ರತಿಭಟನೆ ನಡೆಸಿ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.

ಬಹಿಷ್ಕಾರಕ್ಕೆ ಒಳಗಾಗಿರುವ ನಂಜೇಗೌಡ, ದೊಡ್ಡತಾಯಮ್ಮ ಸಹಾ ತಮ್ಮ ನೋವು ತೋಡಿಕೊಂಡರು. ನಂಜೇಗೌಡರ ಪುತ್ರ ವಕೀಲ ಸಾಗರೆ ಶಿವಕುಮಾರ್, ಪಕ್ಷದ ಪದಾಧಿಕಾರಿಗಳಾದ ಭಾಗ್ಯಮ್ಮ, ವರಕೋಡು ಕೃಷ್ಣೇಗೌಡ, ಸಿಂಧುವಳ್ಳಿ ಶಿವಕುಮಾರ, ಪ್ರದೀಪ್, ಶ್ರೀನಿವಾಸ್ ಇನ್ನಿತರರು ಇದ್ದರು.