ಜಿಲ್ಲೆ

ನಾಲ್ವಡಿಗೆ ಸಿದ್ದರಾಮಯ್ಯ ಅವರ ಹೋಲಿಕೆಗೆ ಖಂಡನೆ

ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸಿದ್ದರಾಮಯ್ಯ ಅವರಿಗೆ ಹೋಲಿಕೆ ಮಾಡಿರುವ ಎಂಎಲ್ಸಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆಯಿಂದ ಭಾನುವಾರ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.

ನಾಲ್ವಡಿ ಅವರ ಇತಿಹಾಸ ತಿಳಿಯದ ಡಾ.ಯತೀಂದ್ರ ಮಾತನಾಡಿರುವುದು ಹಾಸ್ಯಾಸ್ಪದವಾಗಿದೆ. ನಾಲ್ವಡಿ ಅವರಿಗಿಂತ ಮೈಸೂರಿಗೆ ನಮ್ಮಪ್ಪನದೇ ಜಾಸ್ತಿ ಕೊಡುಗೆ ಎಂದು ಹೇಳಿರುವ ಅವರಿಗೆ ಬಹುಶಃ ನಾಲ್ವಡಿ ಅವರು ನಮ್ಮ ರಾಜ್ಯಕ್ಕೆ ನೀಡಿರುವ ನೂರಾರು ಕೊಡುಗೆಗಳು ತಿಳಿದಿಲ್ಲ ಎಂದು ಪ್ರತಿಭಟನಾಕಾರರು ಟೀಕಿಸಿದರು.

ಶಿಕ್ಷಣ, ನೀರಾವರಿ, ಕೈಗಾರಿಕೆ, ಕಾರ್ಖಾನೆಗಳು, ಪ್ರಜೆಗಳಿಗೆ ಸಾಮಾಜಿಕ ನ್ಯಾಯ, ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ನಾಲ್ವಡಿ ಅವರ ಕೊಡುಗೆ ಅವಿಸ್ಮರಣೀಯ ಎಂದು ಹೇಳಿದ್ದಾರೆ.

‘ನಾಲ್ವಡಿ ಭೂಪ- ಮನೆಮನೆ ದೀಪ’ ಎಂದು ಇಂದಿಗೂ ಕನ್ನಡಿಗರು ನೆನೆದುಕೊಳ್ಳುವ ಅಭಿವೃದ್ಧಿಯ ಹರಿಕಾರರಾದ ನಾಲ್ವಡಿ ಅವರಾಗಿದ್ದಾರೆ. ಆದರೆ ಪ್ರತಿ ಕನ್ನಡಿಗರ ಮೇಲೆ ಸಾಲದ ಹೊರೆ ಹೊರೆಸಿರುವ, ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಸಿದ್ದರಾಮಯ್ಯ ಅವರಿಗೆ ಹೋಲಿಕೆ ಮಾಡುವುದು ತರವಲ್ಲ ಎಂದು ದೂರಿದರು.

ರಾಜಕೀಯದಲ್ಲಿ ಹಲವು ಏಳು ಬೀಳುಗಳನ್ನು ಕಂಡು, ಪಕ್ಷಗಳನ್ನು ಬದಲಾವಣೆ ಮಾಡಿ, ರಾಜ್ಯದ ಜನರ ತೆರಿಗೆ ಹಣದಲ್ಲಿ ಐಷಾರಾಮಿ ಜೀವನ ನಡೆಸಿ, ತಮ್ಮ ಸ್ವಾರ್ಥ ಸಾಧನೆಗಾಗಿ ಜನರ ಹಣದಲ್ಲಿ ಜನರಿಗೆ ಬಿಟ್ಟಿ ಭಾಗ್ಯಗಳನ್ನು ನೀಡುತ್ತಿದ್ದಾರೆ. ಇವರು ಮಹಾರಾಜರು ಕಟ್ಟಿಸಿದ ಮೈಸೂರು ಮೆಡಿಕಲ್ ಕಾಲೇಜು, ಕೆ.ಆರ್.ಆಸ್ಪತ್ರೆಗೆ ಸುಣ್ಣ ಬಣ್ಣ ಹೊಡಿಸಲು ಆಗಿಲ್ಲ. ಇಷ್ಟು ದಿನ ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಅವರಿಗೆ ಹೋಲಿಕೆ ಮಾಡಿಕೊಳ್ಳುತ್ತಿದ್ದವರು ಈಗ ನಾಲ್ವಡಿ ಅವರಿಗೆ ಹೋಲಿಕೆ ಮಾಡಲು ಹೊರಟಿರುವುದು ದುರಹಂಕಾರದ ಪರಮಾವಧಿ ಎಂದು ಟೀಕಿಸಿದರು.

ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಮುಖಂಡರಾದ ವಿಕ್ರಂ ಅಯ್ಯಂಗಾರ್, ಗೋಲ್ಡನ್ ಸುರೇಶ್, ಪ್ರಜೀಶ್, ಸಿಂಧುವಳ್ಳಿ ಶಿವಕುಮಾರ್, ವರಕೂಡು ಕೃಷ್ಣೇಗೌಡ, ಬೋಗಾದಿ ಸಿದ್ದೇಗೌಡ, ನೇಹಾ, ಆನಂದ್‌ಗೌಡ, ಡಾ. ಶಾಂತರಾಜೇ ಅರಸ್, ಭಾಗ್ಯಮ್ಮ, ನಂದಕುಮಾರ್, ಹೊನ್ನೇಗೌಡ, ತಾಯೂರು ಗಣೇಶ್, ರಾಧಾಕೃಷ್ಣ, ಎಳನೀರು ರಾಮಣ್ಣ, ಶಿವ ನಾಯ್ಕ, ರಘು ಅರಸ್, ಪ್ರಭಾಕರ್, ದರ್ಶನ್‌ಗೌಡ, ಚಂದ್ರಶೇಖರ್, ಕುಮಾರ್, ಸ್ವಾಮಿಗೌಡ, ಮೂರ್ತಿಲಿಂಗಯ್ಯ, ರವೀಶ್, ವಿಷ್ಣು ಇದ್ದರು.