ಕಟ್ಟಡ ಮತ್ತು ಇತರ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನ ಕಡಿತಗೊಳಿಸಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಕಟ್ಟಡ ಮತ್ತು ಇತರ ಕಾರ್ಮಿಕರ ಸಂಘದಿಂದ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ಸಂಘದ ಜಿಲ್ಲಾಧ್ಯಕ್ಷ ಶಿವನಾಯ್ಕ, ಉಪಾಧ್ಯಕ್ಷ ಹೊಭಿ ನಾಯ್ಕ, ಕಾರ್ಯದರ್ಶಿ ಉಮೇಶ್ ನಾಯ್ಕ, ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ನಾಯ್ಕ , ಖಜಾಂಚಿ ಲಲಿತಾಬಾಯಿ ಬಿ.ಎಸ್ ಇತರರಿದ್ದರು.  
ಜಿಲ್ಲೆ

ಕಟ್ಟಡ ಮತ್ತು ಇತರ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಕಡಿತಕ್ಕೆ ಖಂಡನೆ

ಬಳ್ಳಾರಿ: ಕಟ್ಟಡ ಮತ್ತು ಇತರ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನ ಕಡಿತಗೊಳಿಸಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಕಟ್ಟಡ ಮತ್ತು ಇತರ ಕಾರ್ಮಿಕರ ಸಂಘದಿಂದ ನಗರದ ನಾರಾಯಣರಾವ್ ಉದ್ಯಾನ (ಕಾಗೆ ಪಾರ್ಕ್)ದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಅಖಿಲ ಕರ್ನಾಟಕ ಕಟ್ಟಡ ಮತ್ತು ಇತರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಶಿವನಾಯ್ಕ ಮಾತನಾಡಿ, ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿವೇತನ ಕಡಿತಗೊಳಿಸಿದ್ದು, ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿತ್ತಿದೆ. ಹಿಂದಿನ ಸರ್ಕಾರ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಐದು ಸಾವಿರ ಸ್ಕಾಲರ್‌ಶಿಪ್ ನೀಡಲಾಗುತಿತ್ತು. ಆದರೆ ಈಗ 1,100 ನೀಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ ವಿದ್ಯಾರ್ಥಿ ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಗ್ರಾಮಗಳಲ್ಲಿ ಆಸ್ಪತ್ರೆಗಳ ವ್ಯವಸ್ಥೆ ಇದ್ದರೂ ಮೊಬೈಲ್ ಕ್ಲಿನಿಕ್ ವ್ಯವಸ್ಥೆ ಮಾಡಿರುವುದು ಅನಾವಶ್ಯಕ. ಅದರ ಬದಲಾಗಿ ಕಾರ್ಮಿಕರ ಅವಶ್ಯಕತೆಗಳ ಕಡೆ ಗಮನಹರಿಸಬೇಕು ಎಂದು ತಿಳಿಸಿದರು.

ಕಟ್ಟಡ ಕಾರ್ಮಿಕರ ಮಕ್ಕಳ ಮದುವೆ ಸಹಾಯಧನವನ್ನು ಒಂದು ಲಕ್ಷ ರೂ.ವರೆಗೆ ಹೆಚ್ಚಿಸಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ದುರ್ಬಳಕೆ ನಿಲ್ಲಿಸಬೇಕು. ಎಲ್ಲ ಕಾರ್ಮಿಕರ ವೇತನವನ್ನು 26 ಸಾವಿರಕ್ಕೆ ಏರಿಸಬೇಕು ಮತ್ತು ಪಿಂಚಣಿ 10 ಸಾವಿರ ರೂ.ನೀಡಬೇಕು. ರಾಜ್ಯದ ಎಲ್ಲ ಕಾರ್ಮಿಕ ನೋಂದಾಯಿತ ಸಂಘಗಳಿಗೆ ಸೂಕ್ತ ಮಾನ್ಯತೆ ನೀಡಬೇಕು. ನಕಲಿ ಕಾರ್ಮಿಕ ಕಾರ್ಡ್‌ಗಳ ಹಾವಳಿ ತಡೆಗಟ್ಟಬೇಕು. ಬಾಕಿ ಇರುವ 2021ನೇ ಸಾಲಿನ ಶೈಕ್ಷಣಿಕ ಅರ್ಜಿಯನ್ನು ಪರಿಶೀಲಿಸಿ ಕೂಡಲೇ ಹಣ ವರ್ಗಾವಣೆ ಮಾಡಬೇಕು. ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಧನ ಸಹಾಯ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಅಖಿಲ ಕರ್ನಾಟಕ ಕಟ್ಟಡ ಮತ್ತು ಇತರ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಹೊಭಿ ನಾಯ್ಕ, ಕಾರ್ಯದರ್ಶಿ ಉಮೇಶ್ ನಾಯ್ಕ, ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ನಾಯ್ಕ , ಖಜಾಂಚಿ ಲಲಿತಾಬಾಯಿ ಬಿ.ಎಸ್ ಹಾಗೂ ಮುಖಂಡರಾದ ಯರ‌್ರಿಸ್ವಾಮಿ, ಹನುಮಂತ ರೆಡ್ಡಿ, ನಾರಾಯಣ ನಾಯ್ಕ, ರಿಜ್ವಾನ್, ಮಾರಣ್ಣ, ನರಸಪ್ಪ, ಶಂಕರ್ ಸೇರಿದಂತೆ ಇನ್ನಿತರರು ಹಾಜರಿದ್ದರು.