ಜಿಲ್ಲೆ

ಮುಸ್ಲಿಂ ತುಷ್ಟೀಕರಣ ನೀತಿಗೆ ಖಂಡನೆ

ಹುಬ್ಬಳ್ಳಿ: ಪಶ್ಚಿಮ ಬಂಗಾಳದಲ್ಲಿ ಜಿಹಾದಿ ಮಾನಸಿಕತೆಯ ಮುಸ್ಲಿಂ ಗೂಂಡಾಗಳಿಂದ ಹಿಂದುಗಳ ಮೇಲೆ ದೌರ್ಜನ್ಯ ಹಾಗೂ ಅಲ್ಲಿನ ಸರ್ಕಾರ ಮುಸ್ಲಿಂ ತುಷ್ಟೀಕರಣ ನೀತಿ ಖಂಡಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳದ ಮಹಾನಗರ ಘಟಕದಿಂದ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಇಲ್ಲಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು, ಪಶ್ಚಿಮ ಬಂಗಳಾದ ಕ್ರೌರ್ಯ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ, ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮುಸ್ಲಿಮರ ತುಷ್ಟೀಕರಣ ಮಾಡುತ್ತ ಹಿಂದುಗಳನ್ನು ಅವಹೇಳನ ಮಾಡಿ ದೌರ್ಜನ್ಯ ನಡೆಸಲಾಗುತ್ತಿದೆ. ಅಧಿಕಾರ ಉಳಿವಾಗಿ ಇಂಥ ತುಷ್ಟೀಕರಣ ನೀತಿ ಸರಿಯಲ್ಲ. ಕೂಡಲೇ ಇಂಥ ವರ್ತನೆ ತೋರಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಲ್ಲವಾದರೆ, ಮತ್ತಷ್ಟು ಹೋರಾಟ ತೀವ್ರಗೊಳಿಸುವುದಾಗಿ ಒತ್ತಾಯಿಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಲಾಯಿತು.

ವಿಶ್ವ ಹಿಂದು ಪರಿಷತ್‌ನ ಪ್ರಮುಖರಾದ ರಘು ಯಲ್ಲಕ್ಕನವರ, ಅಶೋಕ ಅಣ್ವೇಕರ, ವಿಜಯ ಕ್ಷೀರಸಾಗರ, ಗಂಗಾಧರ ಸಂಗಮಶೆಟ್ಟರ್, ವಿವೇಕ ಮೊಕಾಶಿ, ಸುನಿಲ್ ಕಟ್ಟಿಮನಿ, ಯಲ್ಲಪ್ಪ ಬಾಗಲಕೋಟೆ ಇತರರು ಇದ್ದರು.