ಮಂಡ್ಯ: ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಹಿರೇಕೋಡಿ ನಂದಿ ಪರ್ವತ ಆಶ್ರಮದಲ್ಲಿ ನಡೆದ ಕಾಮಕುಮಾರ ನಂದಿ ಮಹಾರಾಜ ಜೈನ ಮುನಿಗಳ ಹತ್ಯೆ ಖಂಡಿಸಿ ನಗರದಲ್ಲಿ ಮಂಗಳವಾರ ಜೈನ ಸಮುದಾಯದವರು ಪ್ರತಿಭಟನೆ ನಡೆಸಿದರು.
ಅನಂತನಾಥಸ್ವಾಮಿ ದಿಗಂಬರ ಜೈನ ಸಮಾಜದ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು. ಅಹಿಂಸೆಯೇ ಪರಮ ಧರ್ಮ ತತ್ವಕ್ಕೆ ಕಟಿಬದ್ಧರಾಗಿ, ವಿಶ್ವಕ್ಕೆ ಶಾಂತಿ ಬೋಧಿಸಿದ ಜೈನ ಮತ, ಶಾಂತಿ ಸೌಹಾರ್ದತೆಗೆ ಕಾರಣವಾಗಿದೆ. ಪಶು, ಪಕ್ಷಿಗಳಾಗಿ ಸಕಲ ಜೀವರಾಶಿಗಳಿಗೆ ತೊಂದರೆ ಬಯಸದ ಆದರ್ಶ ಸಮಾಜವಾಗಿದೆ, ಜೈನ ದಿಗಂಬರ ಮುನಿಗಳ ಸನ್ಯಾಸಕ್ಕೆ ಶ್ರೇಷ್ಠ 108 ಗುಣಪಾಲಕರಾದ ದಿಗಂಬರ ಮುನಿಗಳು ನಿದರ್ಶನರಾಗಿದ್ದು, ನಂದಿ ಆಶ್ರಮದಲ್ಲಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಸಮಾಜವೇ ತಲೆ ತಗ್ಗಿಸುವ ವಿಚಾರ ಎಂದು ಖಂಡಿಸಿದರು.
ನಂದಿ ಮಹಾರಾಜರ ಹತ್ಯೆ ಮಾಡಿದ ದುರುಳರಿಗೆ ಕಠಿಣ ಶಿಕ್ಷೆ ನೀಡುವ ನಿಟ್ಟಿನಲ್ಲಿ ಕಾನೂನು ಕ್ರಮ ಜರುಗಿಸಬೇಕು. ಆರೋಪಿಗಳು ಕಾನೂನಿನಿಂದ ತಪ್ಪಿಸಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿ ಶಿಕ್ಷೆ ನೀಡಬೇಕು. ಜೈನ ಮುನಿಗಳು ಹಾಗೂ ಸನ್ಯಾಸಿನಿಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜೈನ ಸಮಾಜದ ಅಧ್ಯಕ್ಷ ಶಾಂತಿ ಪ್ರಸಾದ್, ಕಾರ್ಯದರ್ಶಿ ರವಿ, ಮುಖಂಡರಾದ ಭರತ್‌ಕುಮಾರ್, ವೀರೇಂದ್ರ ಕುಮಾರ್ ಜೈನ್, ಮಹೇಂದ್ರ, ಬಾಹುಬಲಿ, ರಾಕೇಶ್ ಜೈನ್ ಇತರರಿದ್ದರು.