ಬ್ರಾಹ್ಮಣ ಜಾತಿ ಪಟ್ಟಿಯಲ್ಲಿ ಕೆಲ ಜಾತಿಗಳನ್ನು ಸೇರಿಸಿರುವುದರ ವಿರುದ್ಧ ಬೇಲೂರು ತಾಲೂಕು ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳು ತಹಸಿಲ್ದಾರ್ ಶ್ರೀಧರ್ ಕಂಕನವಾಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. 
ಜಿಲ್ಲೆ

ಬ್ರಾಹ್ಮಣ ಪಟ್ಟಿಯಲ್ಲಿ ಕೆಲ ಜಾತಿ ಸೇರ್ಪಡೆಗೆ ಖಂಡನೆ

ಬೇಲೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಎಲ್ಲ ಜಾತಿ, ಉಪಜಾತಿಗಳ ಸಮೀಕ್ಷೆ ಕೈಗೊಳ್ಳುತ್ತಿರುವ ಸಂದರ್ಭ ಬ್ರಾಹ್ಮಣ ಜಾತಿ ಪಟ್ಟಿಯಲ್ಲಿ ಕೆಲ ಜಾತಿಗಳನ್ನು ಸೇರಿಸಿರುವುದರ ವಿರುದ್ಧ ತಾಲೂಕು ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಬ್ರಾಹ್ಮಣ ಮಹಾಸಭಾ ತಾಲೂಕು ಅಧ್ಯಕ್ಷ ವಿಜಯಕೇಶವ ಮಾತನಾಡಿ, ನಮ್ಮ ಬ್ರಾಹ್ಮಣ ಸಮಾಜದಲ್ಲಿಲ್ಲದ ಉಪ ಜಾತಿಗಳನ್ನು ಹಿಂದುಳಿದ ವರ್ಗಗಳ ಆಯೋಗವು ಸೇರಿಸುವುದು ಸರಿಯಲ್ಲ. ಇಂತಹ ತಪ್ಪುಗಳು ಮುಂದುವರಿದರೆ ಸಮುದಾಯಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಆಯೋಗವು ಅನವಶ್ಯಕವಾಗಿ ಬ್ರಾಹ್ಮಣರ ಜತೆ ಸೇರಿಸಿರುವ ಉಪಜಾತಿಗಳನ್ನು ತೆಗೆಯಬೇಕು. ಕ್ರಮ ಸಂಖ್ಯೆ 209ರಲ್ಲಿ ಬ್ರಾಹ್ಮಣ ಕ್ರಿಶ್ಚಿಯನ್, ಕ್ರಮ ಸಂಖ್ಯೆ 883 ಮತ್ತು 1384ರಲ್ಲಿ ಬ್ರಾಹ್ಮಣ ಮುಜಾವರ ಮುಸ್ಲಿಂ ಎಂದು ಉಲ್ಲೇಖ ಮಾಡಿರುವುದು ತಪ್ಪು, ನಮ್ಮ ಸಮುದಾಯದಲ್ಲಿ ಈ ರೀತಿಯ ಯಾವುದೇ ಉಪ ಜಾತಿಗಳಿಲ್ಲ. ಆದ್ದರಿಂದ ತಪ್ಪು ನಮೂದಿಸಿರುವುದನ್ನು ಪಟ್ಟಿಯಿಂದ ತೆಗೆಯದಿದ್ದಲ್ಲಿ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಇಲ್ಲದಿದ್ದಲ್ಲಿ ನಮ್ಮ ಸಮುದಾಯ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶೃಂಗೇರಿ ಶಾರದಾ ಮಠದ ಕಾರ್ಯದರ್ಶಿ ಸುಬ್ರಹ್ಮಣ್ಯ ಮಾತನಾಡಿ, ಶತಮಾನಗಳಿಂದ ಬ್ರಾಹ್ಮಣ ಸಮುದಾಯ ವೇದಶಾಸ್ತ್ರಗಳ ಅಧ್ಯಯನ, ಧಾರ್ಮಿಕ ಆಚರಣೆ ಹಾಗೂ ಸಮಾಜ ಸೇವೆಯಲ್ಲಿ ತೊಡಗಿದೆ. ನಮ್ಮ ಪರಂಪರೆಯಲ್ಲಿ ಬ್ರಾಹ್ಮಣ ಕ್ರಿಶ್ಚಿಯನ್, ಬ್ರಾಹ್ಮಣ ಮುಜಾವರ ಮುಸ್ಲಿಂ ಎಂಬ ಯಾವುದೇ ಉಪಜಾತಿ ಇಲ್ಲ ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಸಮುದಾಯದ ಚಿಂತನೆಗಳನ್ನು ರಾಜ್ಯ ಹಿಂದುಳಿದ ಆಯೋಗದ ಗಮನಕ್ಕೆ ತಲುಪಿಸುವ ಕೆಲಸ ಮಾಡುತ್ತೇನೆ. ಅಂತಿಮ ಪಟ್ಟಿ ಹೊರಬರುವ ಮುನ್ನ ತಿದ್ದುಪಡಿ ಮಾಡಲು ಕ್ರಮ ವಹಿಸಲಾಗುವುದು ಎಂದರು.

ಬ್ರಾಹ್ಮಣ ಮಹಾಸಭಾದ ತೊ.ಚ.ಅನಂತ ಸುಬ್ಬರಾಯ, ವೇದಬ್ರಹ್ಮ ಮಂಜುನಾಥ್, ಮುಖಂಡರಾದ ರಮೇಶ್, ಗಣೇಶ್, ನಾಗರಾಜ್, ಸುರೇಶ್, ಶ್ರೀವತ್ಸ ವಟಿ, ಚಂದ್ರಶೇಖರ, ಜಗದೀಶ್ ಸೇರಿದಂತೆ ಇತರರಿದ್ದರು.