ಶೃಂಗೇರಿ: ಮಲೆನಾಡಿನಲ್ಲಿ ಗುಡ್ಡ ಕುಸಿತಕ್ಕೆ ನಿಜವಾದ ಕಾರಣ ತಿಳಿಯದೇ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಹೇಳಿಕೆಯನ್ನು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಲೆನಾಡಿನ ಗಿರಿ ಪ್ರದೇಶ ಹಾಗೂ ಅರಣ್ಯ ಪ್ರದೇಶಗಳಲ್ಲಿ ಒತ್ತುವರಿ ಮಾಡಿಕೊಂಡು ನಿರ್ಮಿಸಲಾದ ಬಡಾವಣೆ, ತೋಟಗಳನ್ನು ಖುಲ್ಲಾ ಮಾಡಿ ಎಂದು ಆದೇಶ ನೀಡಿರುವುದು ವಿಪರ್ಯಾಸ. ಗಿರಿ ಪ್ರದೇಶಗಳಲ್ಲಿ ಅಕ್ರಮವಾಗಿ ಕಟ್ಟಿಕೊಂಡ ಹೋಂ ಸ್ಟೆಗಳು, ರೆಸಾರ್ಟ್‌ಗಳು ಭೂಕುಸಿತಕ್ಕೆ ಕಾರಣವಾಗಿರಬಹುದು ಎಂದು ದೂರಿದ್ದಾರೆ.
ರೈತರ ಜಮೀನಿನ ಸಮೀಪ ಒತ್ತುವರಿ ಮಾಡಿಕೊಂಡ ಜಾಗಗಳಿಂದ ಭೂಕುಸಿತವಾಗುತ್ತಿಲ್ಲ. ಇತ್ತೀಚಿಗಿನ ವರ್ಷಗಳಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆ ಬೀಳುತ್ತಿದೆ. ಇದು ಕೂಡಾ ಭೂಕುಸಿತಕ್ಕೆ ಕಾರಣವಾಗಿರಬಹುದು. ಆದರೆ ರೈತರು ಮಾಡಿಕೊಂಡ ಒತ್ತುವರಿಯೇ ಭೂಕುಸಿತಕ್ಕೆ ಕಾರಣ ಎಂದು ಅರಣ್ಯ ಸಚಿವರ ಹೇಳಿಕೆಯನ್ನು ನಾವು ಖಂಡಿಸುತ್ತಿದ್ದೇವೆ.ಉನ್ನತ ಸ್ಥಾನದಲ್ಲಿ ಇದ್ದವರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಇಲ್ಲಿನ ವಸ್ತುಸ್ಥಿತಿ ಅರಿತುಕೊಂಡು ಅವರು ಮಾತನಾಡಬೇಕು ಎಂದು ತಿಳಿಸಿದ್ದಾರೆ.