ಪೌರಾಯುಕ್ತ ಕೃಷ್ಣಮೂರ್ತಿ ಕೊಠಡಿಗೆ ಆಗಮಿಸಿದ ಬಿಜೆಪಿ, ಜೆಡಿಎಸ್‌ನ ಕೆಲ ನಗರಸಭೆ ಸದಸ್ಯರು ಮುಖಂಡರು ಅನುದಾನ ಹಂಚಿಕೆ ತಾರತಮ್ಯ ಕುರಿತು ಆಕ್ಷೇಪಿಸುತ್ತಿರುವುದು. ಸಿ.ಗಿರೀಶ್ ಈಶಣ್ಣ, ಜಾಕೀರ್ ಹುಸೇನ್,ಭಾಸ್ಕರ್,ಸಿಕಂದರ್,ರಮೇಶ್ ನಾಯ್ಡು, ಹರ್ಷವರ್ಧನ್ ರಾಜ್, ರಾಘವೇಂದ್ರ, ಚಂದ್ರಶೇಖರ್,ರಮೇಶ್, ಇತರರಿದ್ದಾರೆ. 
ಜಿಲ್ಲೆ

ಅನುದಾನ ಹಂಚಿಕೆ ತಾರತಮ್ಯಕ್ಕೆ ಖಂಡನೆ

ಅರಸೀಕೆರೆ: ನಗರಸಭೆ ವ್ಯಾಪ್ತಿಯ ಎಂಟು ವಾರ್ಡ್‌ಗಳಿಗೆ 15ನೇ ಹಣಕಾಸು ಯೋಜನೆಯ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಮಂಗಳವಾರ ಬಿಜೆಪಿ, ಜೆಡಿಎಸ್‌ನ ಕೆಲ ಸದಸ್ಯರು ಕಿರಿಯ ಇಂಜಿಯರ್ ಮೋಹನ್‌ಕುಮಾರ್ ವಿರುದ್ಧ ಹರಿಹಾಯ್ದರು.

ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗಿದ್ದ ಅನುದಾನ ಹಂಚಿಕೆ ಪಟ್ಟಿ ಹಿಡಿದು ಪೌರಾಯುಕ್ತ ಕೃಷ್ಣಮೂರ್ತಿ ಕೊಠಡಿಗೆ ಆಗಮಿಸಿದ ಮುಖಂಡರು, ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದರು. ಪೌರಾಯುಕ್ತರ ಕರೆ ಮೇರೆಗೆ ಸ್ಥಳಕ್ಕೆ ಆಗಮಿಸಿದ ಮೋಹನ್‌ಕುಮಾರ್, ತರಾತುರಿಯಲ್ಲಿ ಪಟ್ಟಿ ಕಳುಹಿಸಿರುವ ಕಾರಣ ಲೋಪವಾಗಿದೆ. ಮತ್ತೊಮ್ಮೆ ಪರಿಶೀಲಿಸಿ ಲೋಪ ಸರಿಪಡಿಸುವುದಾಗಿ ಹೇಳಿದರು.

ಇದರಿಂದ ರೊಚ್ಚಿಗೆದ್ದ ನಗರಸಭೆ ಮಾಜಿ ಅಧ್ಯಕ್ಷ ಸಿ.ಗಿರೀಶ್, ಯಾರನ್ನು ಕೇಳಿ ಏಳೆಂಟು ವಾರ್ಡ್‌ಗಳಿಗೆ ಅನುದಾನ ನೀಡಿಲ್ಲ? ಅಲ್ಲಿಯ ಜನರು ತೆರಿಗೆ ಕಟ್ಟುವುದಿಲ್ಲವೇ, ಯಾವ ಕಾಣದ ಕೈ ಇಂತಹ ಕೃತ್ಯ ನಡೆಸಲು ನಿಮಗೆ ಪ್ರಚೋದನೆ ನೀಡಿದೆ, ಹಿಂದಿನ ಪೌರಾಯುಕ್ತರ ಅವಧಿಯಲ್ಲಿ ಲಕ್ಷಾಂತರ ರೂ. ಚೆಕ್‌ಗೆ ಸಹಿ ಮಾಡಿಸಿದ್ದೀರಿ, ಎಲ್ಲ ದಾಖಲೆಗಳನ್ನು ಜಿಲ್ಲಾಧಿಕಾರಿಗೆ ನೀಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ನನ್ನನ್ನು ಕೇಳಲು ನೀನು ಯಾರು ಎಂದು ಮಾಜಿ ಅಧ್ಯಕ್ಷ ಸಿ.ಗಿರೀಶ್ ಅವರಿಗೆ ಇಂಜಿನಿಯರ್ ಮೋಹನ್‌ಕುಮಾರ್ ಏಕವಚನದಲ್ಲಿ ಪ್ರತ್ಯುತ್ತರ ನೀಡಿದರು. ಇದರಿಂದ ಕೆರಳಿದ ನಗರಸಭೆ ಸದಸ್ಯರಾದ ಈಶಣ್ಣ, ಜಾಕೀರ್ ಹುಸೇನ್, ಭಾಸ್ಕರ್ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಯ್ಯದ್ ಸಿಕಂದರ್, ರಮೇಶ್ ನಾಯ್ಡು, ಹರ್ಷವರ್ಧನ್ ರಾಜ್, ರಾಘವೇಂದ್ರ, ಚಂದ್ರಶೇಖರ್, ರಮೇಶ್, ಸತೀಶ್ ಸೇರಿ ಹಲವರು ಅಸಮಾಧಾನ ವ್ಯಕ್ತಡಿಸಿದರು. ಸಿಬ್ಬಂದಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಎಂದು ಪೌರಾಯುಕ್ತರಿಗೆ ಹೇಳಿದ್ದರಿಂದ ಕಚೇರಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಅನುದಾನ ಹಂಚಿಕೆಯಲ್ಲಿ ಆಗಿರುವ ತಾರತಮ್ಯವನ್ನು ಶೀಘ್ರ ಸರಿಪಡಿಸುವುದಾಗಿ ಪೌರಾಯುಕ್ತ ಕೃಷ್ಣಮೂರ್ತಿ ಭರವಸೆ ನೀಡಿ ಸಮಾಧಾನಪಡಿಸಿದರು.