ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಪೂಜ್ಯ ಹೆಗ್ಗಡೆಯವರು ಜಗತ್ತಿಗೆ ನೀಡಿದ ಕೊಡುಗೆ ಅಪಾರವಾದದ್ದು. ಬತ್ತಿಗೆ ಅಂಟಿದ ಕಾಡಿಗೆಯಂತೆ, ಸೂರ್ಯ ಮತ್ತು ಚಂದ್ರರಿಗೆ ತಗಲುವ ಗ್ರಹಣದಂತೆ ಈಗಿನ ಪರಿಸ್ಥಿತಿ ಇದೆ. ಮುಂದೆ ಗ್ರಹಣ ಬಿಡಲೇಬೇಕು. ಸೂರ್ಯ ಚಂದ್ರರ0ತೆ ಖಾವಂದರು ಗ್ರಹಣಗಳಿಂದ ಮುಕ್ತರಾಗುತ್ತಾರೆ ಎಂದು ಡಾ. ವೈ.ಎಂ ಭಜಂತ್ರಿ ಹೇಳಿದರು.
ನಗರದ ವಿದ್ಯಾಗಿರಿ ಜನತಾ ಶಿಕ್ಷಣ ಸಮಿತಿಯು ಶ್ರೀ ಕ್ಷೇತ್ರ ಧರ್ಮಸ್ಥಳದ ಅಪಪ್ರಚಾರದ ವಿರುದ್ಧ ಶುಕ್ರವಾರ ಆಯೋಜಿಸಿದ್ದ ಖಂಡನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಖಾವಂದರು ಮಾಡಿದ ಜನೋಪಯೋಗಿ ಕೆಲಸಗಳಿಂದ ಯಾವುದೇ ರೀತಿಯ ಕಪ್ಪು ಚುಕ್ಕೆ ಬೀಳದ ಹಾಗೆ ನಡೆದುಕೊಂಡಿದ್ದಾರೆ. ಸಾವಿರಾರು ಜನರಿಗೆ ಶಿಕ್ಷಣದಾತರು, ಅನ್ನದಾತರು ಆಗಿರುವ ಹೆಗ್ಗಡೆಯವರಿಂದ ಇನ್ನಷ್ಟು ಉತ್ಕೃಷ್ಟವಾದ ಕಾರ್ಯಗಳು ಜರುಗಲಿ ಎಂದು ಆಶಿಸಿದರು.
ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಮಾತನಾಡಿ, ಇತ್ತೀಚಿಗೆ ಧರ್ಮಸ್ಥಳದ ಕುರಿತು ಗೊಂದಲಮಯ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಖೇದದ ಸಂಗತಿ. ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಹೆಗ್ಗಡೆಯವರ ಕುಟುಂಬವನ್ನು ಉದ್ದೇಶಪೂರ್ವಕವಾಗಿ ಕಳಂಕಿತಗೊಳಿಸುವ ಸಮಾಜ ವಿರೋಧಿ ಶಕ್ತಿಗಳು ಷಡ್ಯಂತ್ರ ರೂಪಿಸುತ್ತಿರುವುದು ಖಂಡನೀಯ ಎಂದರು.
ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಖಾವಂದರಿಗೆ ಧರ್ಮಸ್ಥಳ ಧರ್ಮಕ್ಷೇತ್ರವಾದರೆ, ಧಾರವಾಡ ಕರ್ಮ ಕ್ಷೇತ್ರ. ಅವರ ಸಮಾಜ ಹಾಗೂ ಶಿಕ್ಷಣಮುಖಿ ಕಾರ್ಯಗಳನ್ನು ಸಹಿಸದ ಕೆಲ ಸಮಾಜಘಾತುಕ ಶಕ್ತಿಗಳು ಅವರ ಹೆಸರಿಗೆ ಕಳಂಕ ತರುವ ಯೋಜನೆಯಲ್ಲಿದ್ದಾರೆ. ಅಪಸ್ವರ ಎತ್ತುತ್ತಿರುವವರನ್ನು ಖಂಡಿಸಬೇಕು ಎಂದರು.
ಜೆಎಸ್‌ಎಸ್ ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾದ್ಯೆ ಮಾತನಾಡಿ, ಕಾನೂನು ತನ್ನ ಕಾರ್ಯ ಮಾಡಲಿ. ಆದರೆ, ಹಾದಿ ಬೀದಿಗಳಲ್ಲಿ ನ್ಯಾಯ ಕೇಳುವುದು, ವಾಕ್ ಸ್ವಾತಂತ್ರ‍್ಯವಿದೆ ಎಂದು ಮಾನಹಾನಿ ಮಾಡುವುದು ಸರಿಯಲ್ಲ. 52 ವರ್ಷಗಳಿಂದ ಜಾತಿ, ಧರ್ಮ, ಪಂಥ ನೋಡದೆ ಶಿಕ್ಷಣ, ಆರೋಗ್ಯ ಸೇವೆ, ಸ್ವ ಉದ್ಯೋಗ ಸ್ವಾವಲಂಬನೆ ಬದುಕು ನೀಡುತ್ತಿರುವ ಖಾವಂದರಿಗೆ ಸಂಸ್ಥೆಯ ಸದಸ್ಯರೆಲ್ಲ ನೈತಿಕ ಬೆಂಬಲ ನೀಡೋಣ ಎಂದರು.
ಜೆಎಸ್‌ಎಸ್ ಎಂ.ಸಿ.ಎ ಕಾಲೇಜಿನ ನಿರ್ದೇಶಕ ಡಾ. ಸೂರಜ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿದ್ದ ಸಂಸ್ಥೆಯ 25 ಅಂಗಸ0ಸ್ಥೆಗಳ ಮುಖ್ಯಸ್ಥರು ಕೇತ್ರದ ಬಗ್ಗೆ ನಡೆದಿರುವ ಅಪಪ್ರಚಾರ ಖಂಡಿಸುವುದಾಗಿ ಹೇಳಿದರು.
ಪ್ರಿಯಾಂಕಾ ಜಾಧವ ಪ್ರಾರ್ಥಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಜಿನ್ನಪ್ಪ ಕುಂದಗೋಳ ವಂದಿಸಿದರು.