ಜಿಲ್ಲೆ

ನಾಡಪ್ರಭುವಿನ ನಾಮಫಲಕ ಕೆಡವಿದ್ದಕ್ಕೆ ಖಂಡನೆ

ಮೈಸೂರು: ತಾಲೂಕಿನ ಹಂಚ್ಯಾ ಗ್ರಾಮದಲ್ಲಿ ಕೆಂಪೇಗೌಡರ ನಾಮಫಲಕ ಕೆಡವಿದ್ದನ್ನು ಖಂಡಿಸಿರುವ ಕೆಂಪೇಗೌಡ ಯುವಶಕ್ತಿ ವೇದಿಕೆ, ಶಾಂತಿಗೆ ಭಂಗವಾಗದಂತೆ ಮರು ಸ್ಥಾಪಿಸಲು ನಿರ್ಣಯ ಕೈಗೊಂಡಿತು.

ವೇದಿಕೆಯಿಂದ ಗ್ರಾಮದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಕರ್ನಾಟಕ ಕಾವಲು ಪಡೆಯ ಅಧ್ಯಕ್ಷ ಕೆ.ಮೋಹನ್‌ಕುಮಾರ್‌ಗೌಡ ಅವರು, ಯಾವುದೇ ಸಮಾಜದ ಮೂರ್ತಿ, ಪ್ರತಿಮೆ, ಪುತ್ಥಳಿಗಳು ಆ ಸಮುದಾಯದ ಸ್ವಾಭಿಮಾನದ ಸಂಕೇತವಾಗುತ್ತದೆ. ಅಂತಹ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಹಜವಾಗಿ ನೋವಾಗುತ್ತದೆ ಎಂದರು.

ಹಂಚ್ಯಾ ಗ್ರಾಮದಲ್ಲಿ ಎಲ್ಲ ಸಮುದಾಯ, ಜನಾಂಗದವರು ಇದ್ದು, ಸಹಬಾಳ್ವೆಯಿಂದ, ಶಾಂತಿಯಿಂದ ಇರಬೇಕು. ಆದರೆ ಕೆಲವು ಕಿಡಿಗೇಡಿಗಳು ಮಾಡುವ ಇಂತಹ ಕೃತ್ಯದಿಂದ ಗ್ರಾಮದಲ್ಲಿ ಆಶಾಂತಿ, ವೈಷಮ್ಯ ಉಂಟಾಗುತ್ತದೆ. ಆದ್ದರಿಂದ ಅಂತಹ ಯಾವುದೇ ಘಟನೆಗೆ ಅವಕಾಶ ನೀಡದಂತೆ ಸಹಮತದಿಂದ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಕೆಂಪೇಗೌಡರ ಪುತ್ಥಳಿ ನಿರ್ಮಾಣ ಮಾಡಬೇಕಿದೆ. ಆದ್ದರಿಂದ ಜನಾಂಗ ಸೇರಿದಂತೆ ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು. ಸೌಹಾರ್ದತೆ ಕಾಪಾಡಿಕೊಂಡು ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಕೋರಿದರು.

ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‌ಗೌಡ, ನೇಗಿಲಯೋಗಿ ಟ್ರಸ್ಟ್ ಅಧ್ಯಕ್ಷ ರವಿಕುಮಾರ್, ಮೈಸೂರು-ಚಾಮರಾಜನಗರ ಒಕ್ಕಲಿಗರ ಸಂಘದ ನಿರ್ದೇಶಕ ಎ.ರವಿ, ಕೃಷ್ಣೇಗೌಡ, ಶ್ರೀನಿವಾಸ್‌ಗೌಡ, ಮುಖಂಡರಾದ ಸ್ವಾಮಿ, ಶ್ರೀನಿವಾಸ್, ಮಹೇಶ್ ಯರಗನಹಳ್ಳಿ, ಕುಮಾರ್ ಇತರರು ಇದ್ದರು.