ಜಿಲ್ಲೆ

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆಗೆ ಖಂಡನೆ

ಮೈಸೂರು: ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಕೆ.ಆರ್.ಆಸ್ಪತ್ರೆಯ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್‌ನಿಂದ ಧರಣಿ ನಡೆಯಿತು.
ವಿವಿಧ ಬೇಡಿಕೆ ಈಡೇರಿಸುವಂತೆ ಈಗಾಗಲೇ ನಗರದ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಧರಣಿ ನಡೆಸುತ್ತಿರುವ ರೆಸಿಡೆಂಟ್ ಡಾಕ್ಟರ್ಸ್ (ನಿವಾಸಿ ವೈದ್ಯರು) ವೈದ್ಯ ವಿದ್ಯಾರ್ಥಿನಿಯ ಘಟನೆಯನ್ನು ಖಂಡಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾತ್ರಿ ಪಾಳೀಯಲ್ಲಿದ್ದ ವಿದ್ಯಾರ್ಥಿನಿಯ್ನನು ಕಿಡಿಕೇಡಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಘಟನೆಯಿಂದ ರಾತ್ರಿ ಕರ್ತವ್ಯ ಮತ್ತು ತುರ್ತು ವಿಭಾಗದ ಕರ್ತವ್ಯ ನಿರ್ವಹಿಸುವ ಮಹಿಳಾ ವೈದ್ಯರ ಸುರಕ್ಷತೆಯ ಆತಂಕ ತಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೈದ್ಯರ ಮೇಲೆ ಕೆಲವು ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಅಲ್ಲಿ ಪ್ರತಿಭಟನೆ ನಡೆಸುವವರಿಗೆ ರಕ್ಷಣೆ ಇಲ್ಲದಂದಾಗಿದೆ. ಸಿಬಿಐ ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದು, ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ರಾತ್ರಿ ಪಾಳಿಯದಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಮಹತ್ವ ಕೊಡಬೇಕು. ವೈದ್ಯೆಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಅಸೋಸಿಯೇಷನ್ ಮುಖಂಡರಾದ ಡಾ.ಮನೀಷ್‌ನಾಯಕ್, ಡಾ.ಸಿರೀಶ್ ಶಿವರಾಮಯ್ಯ, ಹೇಮಂತ್ ರೆಡ್ಡಿ, ಡಾ.ಅಂಬರೀಶ್, ಡಾ.ವೇಣುಗೋಪಾಲ್ ಇತರರು ಇದ್ದರು.