ಜಿಲ್ಲೆ

ಶಿವರಾಜ್‌ಸಿಂಗ್ ಚೌಹಾಣ್‌ಗೆ ಕೃಷಿ ಸಚಿವ ಸ್ಥಾನ ನೀಡಿರುವುದಕ್ಕೆ ಖಂಡನೆ

ಮಳವಳ್ಳಿ: ಶಿವರಾಜ್‌ಸಿಂಗ್ ಚೌಹಾಣ್ ಅವರನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರನ್ನಾಗಿ ಎನ್‌ಡಿಎ ಆಯ್ಕೆ ಮಾಡಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ ಖಂಡಿಸುತ್ತದೆ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್ ಹಾಗೂ ತಾಲೂಕು ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.


ಕಳೆದ ಕೇಂದ್ರ ಸರ್ಕಾರದ ಆಡಳಿತದ ಅವಧಿಯಲ್ಲಿ ಮಧ್ಯಪ್ರದೇಶದ ಮಂದಸೌರ್‌ನಲ್ಲಿ 6 ರೈತರನ್ನು ಕಗ್ಗೊಲೆ ಮಾಡಲಾಯಿತು. ರೈತರ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ನಡೆಸಿದ ಹೋರಾಟಗಾರ ರೈತರ ಸಾವಿಗೆ ಕಾರಣವಾಗಿದ್ದ ವ್ಯಕ್ತಿಗೆ ಕೃಷಿ ಸಚಿವ ಸ್ಥಾನ ನೀಡಿರುವುದು ನೈತಿಕವಾಗಿ ಖಂಡನೀಯ. ದುರ್ಬಲವಾಗಿರುವ ಬಿಜೆಪಿಯೊಂದಿಗೆ ಹೊಸ ಎನ್‌ಡಿಎ ಸರ್ಕಾರವು ಮೊದಲ ಕ್ಯಾಬಿನೆಟ್ ಸಭೆಯಲ್ಲಿ ತನ್ನ ಮೊದಲ ಕೆಲವು ನಿರ್ಧಾರಗಳಲ್ಲಿ ರೈತ ವಿರೋಧಿ ಎಂದು ಈಗಾಗಲೇ ಸಾಬೀತಾಗಿದೆ. ಪಿಎಂ-ಕಿಸಾನ್ ಅಡಿಯಲ್ಲಿ 2,000 ರೂ.ನೇರ ನಗದು ವರ್ಗಾವಣೆಯ ಕಂತು ಬಿಡುಗಡೆ ಒಂದು ಕಣ್ಣೊರೆಸುವ ತಂತ್ರವಾಗಿ ಹಳೆಯ ಯೋಜನೆಯ ಮುಂದುವರಿಕೆಯಾಗಿದೆ ಎಂದು ಟೀಕಿಸಿದ್ದಾರೆ.


ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು 2019ರಲ್ಲಿ ಪ್ರಾರಂಭವಾಯಿತು, ಆಗ 14.5 ಕೋಟಿ ರೈತರನ್ನು ಒಳಗೊಂಡಿತ್ತು. ಆದರೆ ಪ್ರಸ್ತುತ ಸರ್ಕಾರದಲ್ಲಿ ಅದರ ವ್ಯಾಪ್ತಿಯು 9.3 ಕೋಟಿ ರೈತರಿಗೆ ಇಳಿಕೆಯಾಗಿದೆ ಎಂದು ಆರೋಪಿಸಿದ್ದಾರೆ.


ಎನ್‌ಡಿಎ ಸರ್ಕಾರವು ದೆಹಲಿಯ ಗಡಿಯಲ್ಲಿ ಐತಿಹಾಸಿಕ ಕಿಸಾನ್ ಆಂದೋಲನ ನಡೆಸಿದ ಸಮಯದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದೆ ರೈತ ಸಂಕುಲಕ್ಕೆ ವಂಚನೆ ಮಾಡಿದ್ದು, ಇವರ ರೈತ ವಿರೋಧಿ ನೀತಿಗಳಿಗೆ ದೇಶದ ಜನತೆ ತಕ್ಕಪಾಠ ಕಲಿಸಿದ್ದಾರೆ. 159 ಗ್ರಾಮೀಣ ಕ್ಷೇತ್ರಗಳಲ್ಲಿನ ಸೋಲಿನಿಂದ ಬಿಜೆಪಿ-ಎನ್‌ಡಿಎ ಪಾಠ ಕಲಿಯುತ್ತಿಲ್ಲ ಎಂದು ಆರೋಪಿಸಿದೆ.


ತಮಿಳುನಾಡಿನ ದಿಂಡಿಗಲ್‌ನಿಂದ ಆರ್.ಸಚಿಂತನಂತಂ ಸೇರಿದಂತೆ ಎಸ್‌ಕೆಎಂ ನಾಯಕರ ಗೆಲುವು ರೈತ ಚಳವಳಿಗೆ ಶಕ್ತಿ ತುಂಬಿದಂತಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.