ಜಿಲ್ಲೆ

ಮೆಕಾನಿಕ್‌ಗಳ ಅಗೌರವಕ್ಕೆ ಖಂಡನೆ; ಖಾಸಗಿ ವಾಹಿನಿ ಕೂಡಲೇ ಕ್ಷಮೆಯಾಚಿಸಲು ಆಗ್ರಹ

ಮೈಸೂರು: ಮೆಕಾನಿಕ್‌ಗಳಿಗೆ ಅಗೌರವ ತೋರಿರುವ ಖಾಸಗಿ ವಾಹಿನಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಮೈಸೂರು ಜಿಲ್ಲಾ ದ್ವಿಚಕ್ರ ವಾಹನಗಳ ದುರಸ್ತಿಗಾರರ ಒಕ್ಕೂಟ ಆಗ್ರಹಿಸಿದೆ.


ಖಾಸಗಿ ಚಾನಲ್‌ವೊಂದರ ರಿಯಾಲಿಟಿ ಶೋನಲ್ಲಿ ಮೆಕಾನಿಕ್‌ಗಳನ್ನು ಮದುವೆಯಾದರೆ ಗ್ರೀಸ್ ತಿಂದು ಬದುಕಬೇಕಾಗುತ್ತದೆ ಎಂಬ ಸಂಭಾಷಣೆ ಹೇಳುವ ಮೂಲಕ ವಾಹನ ದುರಸ್ತಿಯಲ್ಲಿ ತೊಡಗಿರುವ ಮೆಕಾನಿಕ್‌ಗಳನ್ನು ಅಪಮಾನಿಸಲಾಗಿದೆ ಎಂದು ಒಕ್ಕೂಟದ ಉಪಾಧ್ಯಕ್ಷ ಕೆ. ಲಿಂಗರಾಜು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.


ಶಿಕ್ಷಣದ ಕೊರತೆ, ಆರ್ಥಿಕ ದುಸ್ಥಿತಿ ಕಾರಣ ಹಲವಾರು ಜನರು ಮೆಕಾನಿಕ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಹಲವರ ಮಕ್ಕಳು ವೈದ್ಯರು, ಇಂಜಿನಿಯರ್‌ಗಳೂ ಆಗಿದ್ದಾರೆ. ಕೆಲವರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಗೌರವಯುತವಾಗಿ ಜೀವನ ನಡೆಸಲು ಇರುವ ವೃತ್ತಿಯೂ ಆಗಿದೆ.

ಹೀಗಿದ್ದರೂ ಖಾಸಗಿ ವಾಹಿನಿಯಲ್ಲಿ ಅಪಹಾಸ್ಯ ಮಾಡುವ ಸಂಭಾಷಣೆ ಹೇಳಿಸಲಾಗಿದೆ. ಆದ್ದರಿಂದ ವಾಹಿನಿ ಹಾಗೂ ಸಂಬಂಧಿಸಿದವರು ಕ್ಷಮೆ ಯಾಚಿಸಬೇಕು.

ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆದಿದ್ದು, ನಿರ್ಲಕ್ಷಿಸಿದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆ ಮುಖಂಡರಾದ ಶಿವಕುಮಾರ್, ಎನ್.ರವೀಂದ್ರಕುಮಾರ್, ಮುಜಾಹಿದ್ ಪಾಷ, ನಟೇಶ್, ಚೋಟೇಸಾಬ್ ಇದ್ದರು.