ಹರೀಶ್ ಮೋಟುಕಾನ ಮಂಗಳೂರು
ನಗರದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕಾಂಕ್ರೀಟ್ ರಸ್ತೆ ಅಗೆಯುವಾಗ ಇರುವ ಉತ್ಸಾಹ ಅದನ್ನು ಮುಚ್ಚಲು ಇರುವುದಿಲ್ಲ. ಮಂಗಳೂರು ಹೃದಯ ಭಾಗದ ಪ್ರಮುಖ ರಸ್ತೆಗಳ ಮಧ್ಯಭಾಗದಲ್ಲಿ ಅಗೆದು ಹಾಕಿರುವ ಗುಂಡಿಗಳನ್ನು ಎರಡು ತಿಂಗಳಾದರೂ ಮುಚ್ಚಿಲ್ಲ. ಈಗಾಗಲೇ ಹಲವು ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗಿವೆ. ಸವಾರರು ಪ್ರಾಣ ಕಳೆದುಕೊಳ್ಳುವ ಸ್ಥಿತಿಯೂ ಎದುರಾಗಿದೆ.
ನಗರದ ಹಲವು ರಸ್ತೆಗಳಲ್ಲಿ ಒಳಚರಂಡಿ, ನೀರಿನ ಪೈಪ್‌ಲೈನ್ ಕಾಮಗಾರಿಗೆ ಅಗೆದು ನಂತರ ಕಾಂಕ್ರೀಟ್ ಹಾಕದೆ ಹಾಗೆಯೇ ಬಿಡಲಾಗಿದೆ. ಹೊಸದಾಗಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ಮಧ್ಯದಲ್ಲೇ ಅಗೆದು ಹಾಕಲಾಗಿದೆ. ಕಾಂಕ್ರೀಟ್ ಕಾಮಗಾರಿ ನಡೆಸುವ ಮುನ್ನ ನೀರಿನ ಪೈಪ್‌ಲೈನ್, ಒಳಚರಂಡಿ ಪೈಪ್‌ಗಳು, ವಿದ್ಯುತ್, ಟೆಲಿಫೋನ್, ಇಂಟರ್‌ನೆಟ್ ಕೇಬಲ್‌ಗಳನ್ನು ನೆಲದಲ್ಲಿ ಸಮರ್ಪಕವಾಗಿ ಅಳವಡಿಸಬೇಕು. ಇದರಿಂದ ಒಮ್ಮೆ ಕಾಂಕ್ರೀಟ್ ಹಾಕಿದ ಬಳಿಕ ಅದನ್ನು ತುಂಡರಿಸುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ. ಆದರೆ ಮಂಗಳೂರಿನ ರಸ್ತೆಗಳನ್ನು ಗಮನಿಸಿದರೆ ಕಾಂಕ್ರೀಟ್ ಹಾಕಿದ ಬಳಿಕ ಅಗೆಯದೇ ಇರುವ ರಸ್ತಗಳೇ ಇಲ್ಲ.
ಎಲ್ಲೆಲ್ಲಿವೆ ತುಂಡರಿಸಿದ ರಸ್ತೆ? ಒಳಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ ಎಂದು ಅಂಬೇಡ್ಕರ್ ವೃತ್ತದಿಂದ (ಜ್ಯೋತಿ) ಬಂಟ್ಸ್‌ಹಾಸ್ಟೆಲ್‌ಗೆ ಸಾಗುವ ರಸ್ತೆಯನ್ನು ಕೆಲವೇ ಮೀಟರ್‌ಗಳ ಅಂತದಲ್ಲಿ ಮೂರು ಕಡೆ ಕತ್ತರಿಸಿ ಎರಡು ತಿಂಗಳು ಕಳೆದರೂ ದುರಸ್ತಿ ಮಾಡಿಲ್ಲ. ಪಿವಿಎಸ್ ಬಳಿಯೂ ಎರಡು ತಿಂಗಳ ಹಿಂದೆ ನೀರಿನ ಪೈಪ್‌ಲೈನ್ ದುರಸ್ತಿಗೆ ರಸ್ತೆ ಅಗೆದಿದ್ದು ಇನ್ನೂ ಸರಿಪಡಿಸಿಲ್ಲ. ಕಂಕನಾಡಿಯಲ್ಲಿ ಒಳಚರಂಡಿಗೆ ಅಗೆಯಲಾದ ರಸ್ತೆಗೆ ಡಾಂಬರು ಹಾಕದೆ ತಿಂಗಳಿನಿಂದ ಹಾಗೆಯೇ ಬಿಡಲಾಗಿದೆ. ಬಂಟ್ಸ್‌ಹಾಸ್ಟೆಲ್ ಬಳಿಯೂ ಕಾಂಕ್ರೀಟ್ ರಸ್ತೆ ಅಗೆದಿದ್ದು, ದುರಸ್ತಿ ಮಾಡಿಲ್ಲ. ಬಿಜೈ ವೃತ್ತದಲ್ಲಿ ರಸ್ತೆಗೆ ಅಳವಡಿಸಿದ ಇಂಟರ್‌ಲಾಕ್ ಎದ್ದು ಹೋಗಿದೆ. ಹಲವು ಪ್ರಮುಖ ಕಾಂಕ್ರೀಟ್ ರಸ್ತೆಗಳಲ್ಲಿ ಈ ಸಮಸ್ಯೆ ಇದ್ದು ವಾಹನ ಸವಾರರಿಗೆ ಸಮಸ್ಯೆಯಾಗಿದೆ. ದಿನವಿಡೀ ವಾಹನ ದಟ್ಟಣೆಗೂ ಕಾರಣವಾಗುತ್ತಿದೆ.
ಮಂಗಳೂರು ನಗರದಲ್ಲಿ ಅವೈಜ್ಞಾನಿಕವಾಗಿ ಕಾಂಕ್ರೀಟ್ ರಸ್ತೆ ಮಾಡಿರುವುದರಿಂದ ಅಲ್ಲಲ್ಲಿ ಆಗಾಗ ತುಂಡರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ತುಂಡರಿಸಿದರೂ ಅದನ್ನು ಸರಿಪಡಿಸಲು ನಾಲ್ಕೈದು ತಿಂಗಳು ತೆಗೆದುಕೊಳ್ಳುತ್ತಾರೆ. ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಜಿ.ಕೆ.ಭಟ್, ಸಾಮಾಜಿಕ ಹೋರಾಟಗಾರ ಮಂಗಳೂರು ನಗರದಲ್ಲಿ ಒಳಚರಂಡಿ ಸಮಸ್ಯೆ ಇದೆ. ಹಲವು ಕಡೆ ರಸ್ತೆಗಳಲ್ಲೇ ಮ್ಯಾನ್‌ಹೋಲ್ ಮೂಲಕ ತ್ಯಾಜ್ಯ ನೀರು ಹೊರಬರುತ್ತದೆ. ದುರಸ್ತಿ ಕಾಮಗಾರಿಗಾಗಿ ರಸ್ತೆ ಅಗೆದ ಬಳಿಕ ಕಾಂಕ್ರೀಟ್ ಹಾಕಿ ಮೊದಲಿನ ಸ್ಥಿತಿಗೆ ತರುವುದು ಗುತ್ತಿಗೆದಾರರ ಜವಾಬ್ದಾರಿ. ಎಲ್ಲೆಲ್ಲಿ ದುರಸ್ಥಿಯಾಗಿಲ್ಲ ಎಂದು ಪರಿಶೀಲಿಸಿ ಗುತ್ತಿಗೆದಾರರಿಗೆ ಶೀಘ್ರ ಸರಿಪಡಿಸುವಂತೆ ಸೂಚನೆ ನೀಡಲಾಗುವುದು. ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಮಹಾನಗರ ಪಾಲಿಕೆ ಆಯುಕ್ತ