ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿಗೆ ಆಗಮಿಸುತ್ತಿರುವ ಕನ್ನಡ ಜ್ಯೋತಿ ರಥವನ್ನು ವಿಜೃಂಭಣೆಯಿಂದ ಸ್ವಾಗತಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಬೀಳ್ಕೊಡಬೇಕು ಎಂದು ಪೊನ್ನಂಪೇಟೆ ತಾಲೂಕು ತಹಸೀಲ್ದಾರ್ ಕೆ.ಎನ್.ಮೋಹನ್ ಕುಮಾರ್ ಹೇಳಿದರು.
ಮಂಡ್ಯದಲ್ಲಿ ಡಿ.20ರಿಂದ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ಆಗಮಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ರಥ ಕೊಡಗು ಜಿಲ್ಲೆಯಲ್ಲಿ ಡಿ.10, 11ರಂದು ಸಂಚರಿಸಲಿದ್ದು, ರಥವನ್ನು ಸ್ವಾಗತಿಸುವ ಸಂಬಂಧ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿರುವ ಭುವನೇಶ್ವರಿ ದೇವಾಲಯದಿಂದ ಹೊರಟ ಕನ್ನಡ ಜ್ಯೋತಿ ಹೊತ್ತ ರಥವು ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಸಾಹಿತ್ಯ ಸಮ್ಮೇಳನದ ಕುರಿತು ಜನರಿಗೆ ಮಾಹಿತಿ ನೀಡುವ ಕಾರ್ಯ ಮಾಡುತ್ತಿದೆ. ಆ ರಥವು ಡಿ.10 ಮತ್ತು 11ರಂದು ಕೊಡಗು ಜಿಲ್ಲೆಯಲ್ಲಿ ಸಂಚರಿಸಲಿದ್ದು ಸಂಪಾಜೆ ಗಡಿ ಮೂಲಕ ಜಿಲ್ಲೆಯನ್ನು ಪ್ರವೇಶಿಸುವ ರಥವು ಮಡಿಕೇರಿ, ವಿರಾಜಪೇಟೆ ಮಾರ್ಗವಾಗಿ ಪೊನ್ನಂಪೇಟೆ ತಾಲೂಕಿಗೆ ಬರಲಿದೆ. ಗೋಣಿಕೊಪ್ಪಲಿನಲ್ಲಿ ಮತ್ತು ಪೊನ್ನಂಪೇಟೆಯಲ್ಲಿ ಅದನ್ನು ಕಳಸ ಹೊತ್ತ ಮಹಿಳೆಯರಿಂದ ಶಾಸ್ತ್ರೋಕ್ತವಾಗಿ ಸ್ವಾಗತಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬೇಕಿದೆ ಎಂದರು.
ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಗೋಣಿಕೊಪ್ಪಲು ಗ್ರಾಪಂ ಅಧ್ಯಕ್ಷರೂ ಆಗಿರುವ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ವಿರಾಜಪೇಟೆಯಿಂದ ಗೋಣಿಕೊಪ್ಪಲು ಮಾರ್ಗವಾಗಿ ಪೊನ್ನಂಪೇಟೆಗೆ ಬರುವ ರಥವನ್ನು ಗೋಣಿಕೊಪ್ಪಲಿನ ಶ್ರೀಉಮಾಮಹೇಶ್ವರಿ ದೇವಾಲಯದ ಬಳಿ ಸ್ವಾಗತಿಸಿ ಬಸ್ ನಿಲ್ದಾಣದಲ್ಲಿ ರಥಯಾತ್ರೆಯ ವಿಚಾರವನ್ನು ಜನರಿಗೆ ಮನದಟ್ಟು ಮಾಡುವ ಮತ್ತು ಕನ್ನಡ ಗೀತಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಮಾತನಾಡಿ, ಪೊನ್ನಂಪೇಟೆಯ ತಹಸೀಲ್ದಾರ್ ಕಚೇರಿ ಬಳಿ ರಥವನ್ನು ಸ್ವಾಗತಿಸಿ ಬಸ್ ನಿಲ್ದಾಣದಲ್ಲಿ ಗೀತಗಾಯನ ಕಾರ್ಯಕ್ರಮ ನಡೆಸಿ, ಶ್ರೀರಾಮಕೃಷ್ಣ ಆಶ್ರಮದವರೆಗೂ ಮೆರವಣಿಗೆ ನಡೆಸಲಾಗುವುದು. ನಂತರ ಶ್ರೀ ರಾಮಕೃಷ್ಣ ಆಶ್ರಮದಲ್ಲಿಯೇ ರಥವು ವಾಸ್ತವ್ಯ ಹೂಡಲಿದ್ದು, ಮಾರನೇ ದಿನ ಕುಶಾಲನಗರಕ್ಕೆ ತೆರಳಲಿದೆ ಎಂದರು.
ಎಲ್ಲರೂ ಕೈಜೋಡಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ವಿರಾಜಪೇಟೆ ತಾಪಂ ಇಒ ಕೊಣಿಯಂಡ ಅಪ್ಪಣ್ಣ ವಿನಂತಿಸಿದರು. ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಿರ ಹರೀಶ್ ಮಾತನಾಡಿ, ಪಟ್ಟಣ ಪಂಚಾಯಿತಿ ವತಿಯಿಂದ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಕೆ.ವಿ. ರಾಮಕೃಷ್ಣ ನಿರ್ದೇಶಕರಾದ ಟಿ.ಆರ್ ವಿನೋದ್, ಎಸ್.ಡಿ.ಗಿರೀಶ್, ಪೊನ್ನಂಪೇಟೆ ಹೋಬಳಿ ಕಂದಾಯ ಅಧಿಕಾರಿ ಸುಧೀಂದ್ರ, ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.