ಜಿಲ್ಲೆ

ಮೈಸೂರು ವೈದ್ಯಕೀಯ ಕಾಲೇಜಿನ ಶತಮಾನೋತ್ಸವ ವಿಶಿಷ್ಟ ಆಚರಣೆಗೆ ತೀರ್ಮಾನ

ಮಂಜುನಾಥ ತಿಮ್ಮಯ್ಯ

ಮೈಸೂರು: ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವವನ್ನು ವಿಶಿಷ್ಟವಾಗಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದರು


ನಗರದಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು ವೈದ್ಯಕೀಯ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘ ಸಹಯೋಗದಲ್ಲಿ ಆಯೋಜಿಸಿದ್ದ ವಿಶಿಷ್ಟ ಸೇವಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.


ಮೈಸೂರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಇದೀಗ 100 ವರ್ಷದ ಸಂಭ್ರಮ. ಏಷ್ಯಾದಲ್ಲಿಯೇ ಸಂಸ್ಥೆಗೆ ಒಂದು ವಿಶೇಷ ಹೆಸರಿದೆ. ಶತಮಾನೋತ್ಸವದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಗುವುದು. ಜತೆಗೆ ಸರ್ಕಾರದಿಂದ ಅನೇಕ ಸವಲತ್ತು ಒದಗಿಸಲಾಗುತ್ತಿದ್ದು, ಇದರ ಪ್ರಗತಿಗೆ ಸಹಕಾರ ನೀಡಲಾಗುವುದು ಎಂದರು.


ವೈದ್ಯ ವೃತ್ತಿ ವಿಶಿಷ್ಟ ಹಾಗೂ ಶ್ರೇಷ್ಠ ವೃತ್ತಿ. ಸಮಾಜದಲ್ಲಿ ವೈದ್ಯರಿಗೆ ವಿಶೇಷ ಗೌರವವಿದೆ. ಪೊಲೀಸರು ಕಳ್ಳರನ್ನು ಶೋಧಿಸುವಂತೆ, ವೈದ್ಯರು ಹೊಸ ರೋಗಕ್ಕೆ ಚಿಕಿತ್ಸೆಗೆ ಔಷಧ ಕಂಡು ಹಿಡಿಯವಲ್ಲಿ ತನಿಖೆ ಹಾಗೂ ಆವಿಷ್ಕಾರದಲ್ಲಿ ತೊಡಗಿರುತ್ತಾರೆ. ಅವರು ಪೊಲೀಸರಿಗಿಂತ ಒಂದು ಹೆಜ್ಜೆ ಹೆಚ್ಚು. ವೈದ್ಯರ ಸೇವೆ ನಿರಂತರವಾಗಿರಲಿ ಎಂದರು.


ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಮೈಸೂರು ವೈದ್ಯಕೀಯ ಕಾಲೇಜಿನ ಶತಮಾನೋತ್ಸವ ಆಚರಣೆ ಸೆ.28ಕ್ಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.


ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಸಮಾಜ ಹಾಗೂ ವೃತ್ತಿ ಸೇವೆ ಸಲ್ಲಿಸಿ ಜನಾನುರಾಗಿ ಆಗಿದಲ್ಲದೆ, ಎಲ್ಲರ ಆರೋಗ್ಯ ಕಾಪಾಡುವಲ್ಲಿ ಶ್ರಮಿಸಿದ್ದಾರೆ. ಇದು ಎಲ್ಲರಿಗೂ ಲಭಿಸುವುದಿಲ್ಲ. ಆದರೆ, ಸಿಕ್ಕಂತಹ ಅವಕಾಶವನ್ನು ಪ್ರಾಮಾಣಿಕವಾಗಿ ಸದುಪಯೋಗ ಪಡಿಸಿಕೊಂಡು ತಮ್ಮನ್ನು ತೊಡಗಿಸಿಕೊಳ್ಳಬೇಕು. ಇದರಿಂದ ಸಾರ್ಥಕ ಬದುಕು ಲಭಿಸುತ್ತದೆ ಎಂದರು.


ಎಂಎಂಸಿ ಪದವಿ ಪಡೆದ ಹಾಲಿ ಹಾಗೂ ವಿಶ್ರಾಂತ ಕುಲಪತಿ, ಮಾಜಿ ನಿರ್ದೇಶಕರು, ಸಂಘದ ಪೂರ್ವ ಅಧ್ಯಕ್ಷರು, ನಿವೃತ್ತ ವೈದ್ಯಕೀಯ ನಿರ್ದೇಶಕರು, ಉನ್ನತ ಅಧಿಕಾರಿಗಳು, ಹಿರಿಯ ವಿದ್ಯಾರ್ಥಿಗಳಿಗೆ ವಿಶಿಷ್ಟ ಸೇವಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.


ಎಂಎಂಸಿ ಸಂಸ್ಥೆ ಡೀನ್ ದ್ರಾಕ್ಷಾಯಣಿ, ಆರ್‌ಜಿಯುಎಚ್‌ಎಸ್ ಉಪಕುಲಪತಿ ಎಂ.ಕೆ.ರಮೇಶ್ ಮಾತನಾಡಿದರು. ಕೂಡ್ಲಿಗಿ ಶಾಸಕ ಎನ್.ಟಿ.ಶ್ರೀನಿವಾಸ್, ಎಂಎಎ ಟ್ರಸ್ಟ್ ಚೇರ‌್ಮನ್ ಡಾ.ಎಸ್.ಚಂದ್ರಶೇಖರ್ ಶೆಟ್ಟಿ, ಅಧ್ಯಕ್ಷ ಡಾ.ಸಿ.ಡಿ.ಶ್ರೀನಿವಾಸ ಮೂರ್ತಿ, ಕಾರ್ಯಕಾರಿ ಅಧ್ಯಕ್ಷ ಎಚ್.ಎನ್.ದಿನೇಶ್, ಕಾರ್ಯದರ್ಶಿ ಡಾ.ಎಚ್.ಬಿ.ಶಶಿಧರ್, ಖಜಾಂಚಿ ಡಾ.ಸರ್ವೇಶ ರಾಜೇ ಅರಸ್, ಡಾ.ಎಚ್.ರವಿಕುಮಾರ್ ಪಾಲ್ಗೊಂಡಿದ್ದರು.