ಕುಶಾಲನಗರ:
ಮಹಿಳೆಯರು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಸ್ವಾವಲಂಬಿಗಳಾಗಿ ಉತ್ತಮವಾದ ಬದುಕು ಕಟ್ಟಬೇಕೆಂದು ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪಿಕಾ ಹೇಳಿದರು. ಕುಶಾಲನಗರ ತಾಲೂಕು ಕೂಡಿಗೆಯ ಕೃಷಿ ಫಾರಂ ಒಳಗಿರುವ ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ 30 ದಿನಗಳ ಕಾಲ 31 ಮಹಿಳೆಯರಿಗೆ ಹಮ್ಮಿಕೊಂಡಿದ್ದ ಟೈಲರಿಂಗ್ ತರಬೇತಿಯ 271 ನೇ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಅರ್ಹತಾ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ರಾಷ್ಟ್ರೀಕೃತ ಸಂಸ್ಥೆಯಾಗಿರುವ ಯೂನಿಯನ್ ಬ್ಯಾಂಕ್ ವತಿಯಿಂದ ಕೂಡಿಗೆಯಲ್ಲಿ ತೆರೆದಿರುವ ಸ್ವ ಉದ್ಯೋಗ ತರಬೇತಿ ಸಂಸ್ಥೆ ಮಹಿಳೆಯರಿಗೆ ಅತ್ಯಂತ ಹೆಚ್ಚು ಉಪಯುಕ್ತವಾದ ತರಬೇತಿಗಳನ್ನು ನೀಡುವ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳಾಗಿ ರೂಪಿಸುತ್ತಿರುವುದು ಹೆಮ್ಮೆಯ ಸಂಗತಿ.
ಮಹಿಳೆಯರು ತಾವು ಕಲಿತ ಉದ್ಯೋಗವನ್ನು ಸಮರ್ಥವಾಗಿ ಬಳಕೆ ಮಾಡುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕಿದೆ. ಆಧುನಿಕ ಜೀವನ ಶೈಲಿಯಿಂದ ಬದಲಾಗುತ್ತಿರುವ ಒತ್ತಡಗಳಿಂದ ತಮ್ಮ ಆರೋಗ್ಯಕ್ಕೂ ಹೆಚ್ಚಿನ ನಿಗಾ ವಹಿಸಬೇಕು.
ಪ್ರತಿ ಮಹಿಳೆಯರು ಆಗಾಗ್ಗೆ ತಪ್ಪದೇ ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶ ಪರೀಕ್ಷಿಸಿಕೊಳ್ಳುವ ಮೂಲಕ ಹಿಮೋಗ್ಲೋಬಿನ್ ಅಂಶದ ಕೊರತೆಯಿಂದ ಸಂಭವಿಸುವ ಅನಾರೋಗ್ಯಗಳನ್ನು ತಡೆಗಟ್ಟಬೇಕೆಂದರು.
ಗ್ರಾಮೀಣ ಸ್ವ - ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಪ್ರಕಾಶ್ ಕುಮಾರ್ ಮಾತನಾಡಿ, ಯೂನಿಯನ್ ಬ್ಯಾಂಕ್ ವತಿಯಿಂದ ದೇಶವ್ಯಾಪಿ 600 ತರಬೇತಿ ಸಂಸ್ಥೆಗಳ ಪೈಕಿ ಕೊಡಗು ಜಿಲ್ಲೆಯ ಕೂಡಿಗೆಯ ಸಂಸ್ಥೆಯೂ ಒಂದಾಗಿದೆ. ಇದೂವರೆಗೂ ಸಂಸ್ಥೆಯಲ್ಲಿ 7500 ಅಭ್ಯರ್ಥಿಗಳಿಗೆ ವಿವಿಧ ರೀತಿಯ ತರಬೇತಿಗಳನ್ನು ನೀಡಲಾಗಿದೆ. ಈ ಪೈಕಿ 5500 ಮಹಿಳೆಯರೇ ಹೆಚ್ಚಿನ ಫಲಾನುಭವಿಗಳಾಗಿದ್ದಾರೆ.
ಪುರುಷರಿಗಿಂತ ಗ್ರಾಮೀಣ ಮಹಿಳೆಯರಲ್ಲಿ ಕಲಿಕೆಯ ತರಬೇತಿಗೆ ಹೆಚ್ಚಿನ ಆಸಕ್ತಿಯಿದ್ದು ಅವರಿಗೆ ಕೌಟುಂಬಿಕವಾದ ಸಮಸ್ಯೆಗಳು ಒಂದೆಡೆಯಾದರೆ, ಅವರು ಏಕಾಂಗಿಯಾಗಿ ಸ್ವ ಉದ್ಯೋಗ ತರಬೇತಿಗಳಿಗೆ ನೇರವಾಗಿ ಬಂದು ಕಲಿಯುವ ಸ್ವಾತಂತ್ರ‍್ಯವೇ ಇಲ್ಲದಿರುವ ಅನೇಕ ಪ್ರಕರಣಗಳು ಕಂಡು ಬರುತ್ತಿದೆ. ತರಬೇತಿ ಅವಧಿಯಲ್ಲಿ ಕಲಿತ ಉದ್ಯೋಗವನ್ನು ತಾವೂ ಕಲಿತು ಇತರರಿಗೂ ಕಲಿಸಬೇಕೆಂದು ಮಹಿಳೆಯರಿಗೆ ಕರೆಕೊಟ್ಟರು.
ಚಿಕ್ಕಮಗಳೂರು ಸುಕನ್ಯಾ ಮಹಿಳೆಯರಿಗೆ ತಿಂಗಳ ಕಾಲ ಸೂಕ್ತ ತರಬೇತಿ ಹಾಗೂ ಹೊಲಿಗೆಯಂತ್ರಗಳ ಕುರಿತಾದ ಸಮಗ್ರ ಮಾಹಿತಿ ನೀಡಿದರು.
ಸಂಸ್ಥೆಯ ಸಲಾವುದ್ದೀನ್, ಪ್ರೀತಿ, ನವ್ಯ,ರೂಪ ಇದ್ದರು.