ಹುಬ್ಬಳ್ಳಿ : ನಗರದ ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ಗಂಗಿವಾಳ ಗ್ರಾಮದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಗಂಗಿವಾಳ ಗ್ರಾಮದಲ್ಲಿ ಎಸ್ಡಿಎಂ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ಉಚಿತ ದಂತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಎಸ್ಡಿಎಂ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯ ಡಾ. ಶೋಧನ್ ಮಾತನಾಡಿ, ಅತಿಯಾದ ತಂಬಾಕು ಸೇವನೆ, ಪಾನಮಸಾಲಾ ಸೇವನೆ ಹಲ್ಲಿನ ರೋಗಗಳಿಗೆ ಮುಖ್ಯ ಕಾರಣ. ಹಲ್ಲಿನ ಸ್ವಚ್ಛತೆ ಕಾಪಾಡಿಕೊಳ್ಳದೇ ಇದ್ದರೆ ಒಸಡಿಗೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳುತ್ತವೆ. ಪ್ರತಿಯೊಬ್ಬ ಮನುಷ್ಯನಿಗೂ ಹಲ್ಲಿನ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು ಎಂದು ಸಲಹೆ ನೀಡಿದರು.
ಅತಿಥಿಯಾಗಿದ್ದ ರಾಯನಾಳ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾಗರಾಜ ದೊಡ್ಡಮನಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರೂಪಾ ಇಂಗಳಹಳ್ಳಿ, ಸಮಾಜದಲ್ಲಿ ವಕೀಲ ವೃತ್ತಿಗೆ ಅಗ್ರಸ್ಥಾನವಿದೆ. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಪ್ರೊ. ಬಾಬುಲಾಲ ದರಗದ, ಪ್ರೊ. ದೀಪಾ ಪಾಟೀಲ, ಪ್ರೊ. ಶ್ರೀಶೈಲ ಮುಧೋಳ, ಪ್ರೊ. ಪೂರ್ಣಿಮಾ ಕುರ್ಡಿಕೆರಿ, ಸುರೇಶ ಲಿಂಬಿಕಾಯಿ, ಸತೀಶ ಸಿ.ವಿ. ಹಾಗೂ ಇತರರು ಹಾಜರಿದ್ದರು. ಬಸಮ್ಮ ಕಟಗಿ ಸ್ವಾಗತಿಸಿದರು. ಮಂಜುಳಾ ಎಚ್.ಆರ್. ನಿರೂಪಿಸಿದರು. ಸುರೇಶ ಲಿಂಬಿಕಾಯಿ ವಂದಿಸಿದರು.