ಜಿಲ್ಲೆ

ಭಕ್ತಿ, ಸೇವೆ ತ್ಯಾಗಮಯವಾಗಿರಲಿ

ಚನ್ನಗಿರಿ: ನಮ್ಮಲ್ಲಿನ ಭಕ್ತಿ ಸದಾ ತ್ಯಾಗಮಯವಾಗಿರಬೇಕು. ಇಲ್ಲದಿದ್ದರೆ ನಾವು ಮಾಡುವಂತಹ ಪೂಜೆ, ಸೇವೆಗಳು ಶೂನ್ಯವಾಗುತ್ತದೆ ಎಂದು ಹಾಲಸ್ವಾಮಿ ವಿರಕ್ತಮಠದ ಡಾ.ಬಸವ ಜಯಚಂದ್ರ ಶ್ರೀಗಳು ತಿಳಿಸಿದರು.

ಪಟ್ಟಣದ ಹಾಲಸ್ವಾಮಿ ವಿರಕ್ತಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಗುಡ್ಡಾಪುರದ ದಾನಮ್ಮ ತಾಯಿಯವರ ವಚನಾಮೃತ ಪ್ರವಚನ ಹಾಗೂ ಶಿವಲಿಂಗೇಶ್ವರ ಶ್ರೀ, ಹಾಲಸ್ವಾಮಿಯವರ ಸಂಸ್ಕರಣೆ, ಲಿಂ. ಶ್ರೀಕಂಠ ಶ್ರೀಗಳ 39ನೇ ವರ್ಷದ ಸಂಸ್ಕರಣೆ, ಲಿಂ. ಜಯದೇವ ಶ್ರೀಗಳ ತೃತೀಯ ವರ್ಷದ ಸಂಸ್ಮರಣೋತ್ಸವ ಹಾಗೂ ಬಸವತತ್ವ ಸಮಾರೋಪದಲ್ಲಿ ಶನಿವಾರ ಮಾತನಾಡಿದರು.

ದೇವರ ಕೃಪೆಗೆ ಪಾತ್ರರಾಗಬೇಕಾದರೆ ಶುದ್ಧ ಮನಸ್ಸಿನಿಂದ ಅರಾಧಿಸಿಬೇಕು ಎಂದರು.

ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ, ಸಾಧನೆ ಮಾಡಬೇಕಾದರೆ ಹಿಂದೆ ಗುರು, ಮುಂದೆ ಗುರಿ ಇರಬೇಕು. ಮೊದಲಿನಿಂದಲೂ ನಾನು ಮಠಮಾನ್ಯಗಳಲ್ಲಿ ಇದ್ದು ಸೇವೆ ಮಾಡಿದ ಫಲವಾಗಿ ಶಾಸಕನಾಗಿದ್ದೇನೆ. ಗುರುಗಳು ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಏನೇ ಹೇಳಿದರೂ ಪಾಲಿಸುವೆ ಎಂದರು.

ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಪಟೇಲ್ ಮಾತನಾಡಿ, ರಾಜ್ಯದಲ್ಲಿ ಮೂರು ಸಾವಿರಕ್ಕಿಂತ ಹೆಚ್ಚು ಮಠಗಳು ಸೇವೆಯಲ್ಲಿ ನಿರತವಾಗಿದೆ. ಎಲ್ಲ ಮಠಗಳ ಗುರಿ ಆಲೋಚನೆಗಳು ಒಂದೇ ಆದಾಗ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು.

ಅದರಂತೆ, ರಾಜಕಾರಣದಲ್ಲಿಯೂ ಎಲ್ಲ ರಾಜಕಾರಣಿಗಳ ಧೋರಣೆ ಉದ್ದೇಶ ಒಂದೇ ಆದಾಗ ರಾಜಕಾರಣದಲ್ಲಿ ಉತ್ತಮ ಬದಲಾವಣೆ ಕಾಣಬಹುದಾಗಿದೆ ಎಂದರು.

ಕೊಟ್ಟೂರು ಡಾ. ಸಿದ್ದಲಿಂಗ ಶ್ರೀಗಳು, ಬೆಂಗಳೂರು ವೀರಸಿಂಹಾಸನ ಸಂಸ್ಥಾನ ಮಠದ ಡಾ.ಮಹಾಂತಲಿಂಗ ಶ್ರೀಗಳು, ಹಗರಿಬೊಮ್ಮನಹಳ್ಳಿ ಡಾ. ಮಹೇಶ್ವರ ಶ್ರೀ, ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಶ್ರೀ, ನಿವೃತ್ತ ಪೊಲೀಸ್ ಕಮಿಷನರ್ ಬಿ.ಜಿ. ಜ್ಯೋತಿಪ್ರಕಾಶ್ ಮಿರ್ಜಿ, ಡಾ.ಎಂ.ಬಿ. ಗಂಗಾಧರ್, ಎಂ.ಡಿ. ಮಹಬಲೇಶ್ವರ, ಎಂ.ಬಿ. ಮಂಜುನಾಥ್ ಹೊಸಕೋಟೆ ಇದ್ದರು.