ಬೆಂಗಳೂರು: ಫಾಸ್ಟ್ಟ್ಯಾಗ್ ಕಡ್ಡಾಯ ನಿಯಮ ಜಾರಿಯಾಗಿ ಕೆಲ ದಿನಗಳಾಗಿರುವಂತೆಯೇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ಪ್ಲಾಜಾ ಪ್ರದೇಶದ ನಿವಾಸಿಗಳಿಗೆ ರಿಯಾಯಿತಿ ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿಗಳ ಟೋಲ್ಪ್ಲಾಜಾದ 20 ಕಿ.ಮೀ. ವ್ಯಾಪ್ತಿಯಲ್ಲಿನ ನಿವಾಸಿಗಳು ಫಾಸ್ಟ್ಟ್ಯಾಗ್ ಮೂಲಕ ಟೋಲ್ಶುಲ್ಕ ಪಾವತಿಸಲು ಮಾಸಿಕ ಪಾಸ್ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಹಲವು ರಿಯಾಯಿತಿ ಸೇವೆಗಳನ್ನೂ ಪ್ರಾಧಿಕಾರ ನೀಡಿದೆ.
ಈ ಹಿಂದೆ ಯಾವುದೇ ವಾಹನ 1 ಟೋಲ್ನಲ್ಲಿ ಹೋಗಿ 24 ಗಂಟೆಯೊಳಗೆ ಮತ್ತೆ ಅದೇ ಟೋಲ್ಗೆ ವಾಪಸ್ ಬಂದರೆ ರಿಯಾಯಿತಿ ಸಿಗುತ್ತಿರಲಿಲ್ಲ ಎಂಬ ದೂರಿತ್ತು. ಈ ಕೊರತೆ ಸರಿಪಡಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಂದೇ ಟೋಲ್ನಲ್ಲಿ 24 ಗಂಟೆಯೊಳಗೆ ಹೋಗಿ ವಾಪಸ್ ಬರುವವರಿಗೆ ತನ್ನಿಂದ ತಾನೇ ರಿಯಾಯಿತಿ ದೊರೆಯುವಂತಹ ವ್ಯವಸ್ಥೆ ಮಾಡಿದೆ.
20 ಕಿಲೋಮೀಟರ್ಗೆ 300 ರೂಪಾಯಿ
ಟೋಲ್ಪ್ಲಾಜಾ ಸುತ್ತಲಿನ ಗ್ರಾಮಗಳ ವಾಹನಗಳಿಗೆ ರಿಯಾಯಿತಿ ನೀಡುತ್ತಿಲ್ಲ ಎಂಬ ದೂರಿಗೂ ಪರಿಹಾರ ಸಿಕ್ಕಿದೆ. ಟೋಲ್ಪ್ಲಾಜಾದ 20 ಕಿ.ಮೀ. ವ್ಯಾಪ್ತಿಯ ನಿವಾಸಿಗಳು 300 ರೂ. ಪಾವತಿಸಿ ಮಾಸಿಕ ಪಾಸ್ ಪಡೆಯಬಹುದಾಗಿದೆ. ಅದೇ ರೀತಿ 10 ಕಿ.ಮೀ. ವ್ಯಾಪ್ತಿಯೊಳಗಿದ್ದರೆ 150 ರೂಪಾಯಿಗೆ ಪಾಸ್ ಸಿಗಲಿದೆ. ಮಾಸಿಕ ಪಾಸ್ ಪಡೆಯುವವರು ಎಷ್ಟು ಬಾರಿ ಬೇಕಾದರೂ ಟೋಲ್ಪ್ಲಾಜಾಗಳಲ್ಲಿ ಓಡಾಡಬಹುದಾಗಿದೆ.
ಫಾಸ್ಟ್ಟ್ಯಾಗ್ ಪಥದಲ್ಲಿ ಸಂಚರಿಸುವುದು ಕಡ್ಡಾಯವಾಗಿರುವುದರಿಂದ ಮೊದಲು ಫಾಸ್ಟ್ಟ್ಯಾಗ್ ಐಡಿಯಿಂದಲೇ ಶುಲ್ಕ ಕಡಿತವಾಗುತ್ತದೆ. ನಂತರ ಕ್ಯಾಷ್ಬ್ಯಾಕ್ ರೂಪದಲ್ಲಿ ವಾಹನಗಳ ಫಾಸ್ಟಾ್ಯಗ್ ಅಕೌಂಟ್ಗೆ ಹಣ ಮರುಪಾವತಿಯಾಗುತ್ತದೆ.
ಆನ್ಲೈನ್ ನೋಂದಣಿ
ಮಾಸಿಕ ಪಾಸ್ ಪಡೆಯುವವರು ಟೋಲ್ಪ್ಲಾಜಾದಿಂದ 20 ಅಥವಾ 10 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕುರಿತ ದಾಖಲೆಗಳನ್ನು ಸಲ್ಲಿಸಿ ಫಾಸ್ಟ್ಟ್ಯಾಗ್ ಐಡಿ ಪಡೆಯಬಹುದಾಗಿದೆ. ಅದಾಗದಿದ್ದರೆ ಈಗಾಗಲೆ ಫಾಸ್ಟ್ಟ್ಯಾಗ್ ಐಡಿ (ಸ್ಟಿಕ್ಕರ್) ಪಡೆದಿದ್ದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವೆಬ್ಸೈಟ್ಗೆ ತೆರಳಿ ಮಾಸಿಕ ಪಾಸ್ ಕುರಿತಂತೆ ಐಡಿ ಮತ್ತು ವಾಹನದ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಳ್ಳಬಹುದು.
ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ಟ್ಯಾಗ್ಗೆ ಸಂಬಂಧಿಸಿದಂತೆ ನಿಗದಿ ಮಾಡಿರುವ ಟೋಲ್ಫ್ರೀ ಸಂಖ್ಯೆ 1800 102 6480 ಗೆ ಕರೆ ಮಾಡಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಏನಾದರೂ ಸಮಸ್ಯೆಗಳಿದ್ದರೆ ಟೋಲ್ಫ್ರೀ ಸಂಖ್ಯೆ 1033ಗೆ ಕರೆ ಮಾಡಿ ದೂರು ದಾಖಲಿಸಬಹುದು.