ಜಿಲ್ಲೆ

ಸೂರ್ಯ ಗಾಯತ್ರಿ ಅವರ ಸಂಗೀತ ಕಛೇರಿ

ಸಂಗೀತ ರಸಿಕರ ಮೆಚ್ಚುಗೆ ಗಳಿಸಿರುವ ವಿದುಷಿ ಸೂರ್ಯ ಗಾಯತ್ರಿ ಅವರು ಜೂನ್ 4 ರಂದು ಸಾಂಸ್ಕೃತಿಕ ನಗರಿಯಲ್ಲಿ ಸಂಗೀತದ ಕಂಪು ಚೆಲ್ಲಲಿದ್ದಾರೆ.

ಅಂದು ಸಂಜೆ 6 ಗಂಟೆಗೆ ಬೆಳದಿಂಗಳ ಸಂಗೀತ-255ರ ಅಂಗವಾಗಿ ಚಾಮುಂಡಿಬೆಟ್ಟದ ತಪ್ಪಲಿನ ಶ್ರೀ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂಗೀತ ಸುಧೆ ಹರಿಸಲಿದ್ದಾರೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇವರಿಗೆ ವಿದ್ವಾನ್ ಪಿ.ವಿ.ಸನಿಲ್, ಪಿ.ವಿ.ಅನಿಲ್ ಹಾಗೂ ವಿದ್ವಾನ್ ವಾಜಪಳ್ಳಿ ಕೃಷ್ಣಕುಮಾರ್ ಪಕ್ಕವಾದ್ಯ ಸಹಕಾರ ನೀಡಲಿದ್ದಾರೆ.

ವಿದುಷಿ ಸೂರ್ಯ ಗಾಯತ್ರಿ ಹದಿನೇಳನೆಯ ವಯಸ್ಸಿಗೆ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಕಲಾವಿದೆ. ಕೇರಳ ಸುಪ್ರಸಿದ್ಧ ಮೃದಂಗ ವಾದಕ ವಿದ್ವಾನ್ ಪಿ.ವಿ.ಅನಿಲ್ ಇವರ ತಂದೆ. ತಾಯಿ ವಿ.ಕೆ.ದಿವ್ಯ ಕವಯತ್ರಿ. ಇವರು ದೇಶದ ಎಲ್ಲ ರಾಜ್ಯಗಳಲ್ಲೂ ಸಂಗೀತ ಕಛೇರಿ ನೀಡಿದ್ದಾರೆ. ತ್ರಿವೆಂಡ್ರಂ ಕಲಾನಿಧಿ ಸಂಗೀತ ರತ್ನ, ಬಾಲಗಾನ ಕಲಾಭಾರತಿ, ಸಮಾಜಶಕ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪಡೆದಿದ್ದಾರೆ.