ಜಿಲ್ಲೆ

ಕೊಡಗಿನಲ್ಲಿ ಭೂ ಪರಿವರ್ತನೆ ಆತಂಕ

ಸುನಿಲ್ ಪೊನ್ನೇಟಿ

ಮಡಿಕೇರಿ:

ಪಶ್ಚಿಮ ಘಟ್ಟದ ಸೂಕ್ಷö್ಮ ಪ್ರದೇಶದಲ್ಲಿ ಇರುವ ಕೊಡಗಿನಲ್ಲಿ ಯಾವುದೇ ಲಂಗು ಲಗಾಮಿಲ್ಲದೆ ಭೂ ಪರಿವರ್ತನೆ ಮುಂದುವರಿದಿದೆ. ಭೂ ಪರಿವರ್ತನೆಗೆ ಸಂಬAಧಿಸಿದAತೆ ಕಳೆದ ಮೂರು ವರ್ಷಗಳಲ್ಲಿ 1,977 ಪ್ರಸ್ತಾವನೆಗಳು ಸರ್ಕಾರದಿಂದ ಸ್ವೀಕೃತವಾಗಿದೆ. ಈ ಬೆಳವಣಿಗೆ ಬಗ್ಗೆ ಆತಂಕ ತೋರಿಸುತ್ತಿರುವ ಪರಿಸರ ಪ್ರೇಮಿಗಳು, ಅನಿಯಮಿತ ಭೂ ಪರಿವರ್ತನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಭೂ ಪರಿವರ್ತನೆ ಮತ್ತು ಇದರಿಂದ ಆಗುವ ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದ ಚಿಂತನೆಯೊAದನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಮಾತುಗಳು ಪರಿಸರಾಸಕ್ತರಲ್ಲಿ ಒಂದಿಷ್ಟು ನಿರೀಕ್ಷೆಗಳನ್ನು ಮೂಡಿಸಿದೆ.

ಇತ್ತೀಚೆಗಷ್ಟೇ ಪಕ್ಕದ ಕೇರಳದ ವಯನಾಡಿನಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತ, ನಮ್ಮ ರಾಜ್ಯದ ಶಿರಾಡಿ, ಉತ್ತರಕನ್ನಡ ಜಿಲ್ಲೆಯಲ್ಲಿನ ದುರ್ಘಟನೆಗಳ ನಂತರ ಪಶ್ಚಿಮಘಟ್ಟದ ಸಂರಕ್ಷಣೆಗೆ ಸರ್ಕಾರ ವಿಶೇಷ ಆದ್ಯತೆ ಕೊಡುತ್ತಿದೆ. ಸೂಕ್ಷ್ಮ ಪರಿಸರ ಪ್ರದೇಶ ಹೊಂದಿರುವ ಪಶ್ಚಿಮ ಘಟ್ಟ ರಕ್ಷಣೆ ಮಾಡದಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕರ್ನಾಟಕ ಸರ್ಕಾರ ಇದನ್ನು ರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಒಂದು ಭಾಗವಾಗಿ ಈ ಪ್ರದೇಶದ ಭೂ ಪರಿವರ್ತನೆ ಪ್ರಸ್ತಾವನೆಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವ ಬಗ್ಗೆ ಚಿಂತನೆ ಹಂಚಿಕೊAಡಿದ್ದು, ಪರಿಸರ ಸೂಕ್ಷ್ಮ ಪ್ರದೇಶ ರಕ್ಷಿಸುವ ಸಲುವಾಗಿ ಒಂದು ಮಾಸ್ಟರ್ ಪ್ಲಾನ್ ರೂಪಿಸುವ ತೀರ್ಮಾನವನ್ನೂ ತೆಗೆದುಕೊಳ್ಳಲಾಗಿದೆ.

ಕರ್ನಾಟಕ, ಕೇರಳ ಹಾಗೂ ಪಶ್ಚಿಮಘಟ್ಟದ ಇತರ ಭಾಗಗಳಲ್ಲೂ ಹಲವೆಡೆ ಭೂಕುಸಿತ, ಗುಡ್ಡ ಕುಸಿತ ಸಂಭವಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸಚಿವ ಖಂಡ್ರೆ, ಕೊಡಗಿನಲ್ಲಿ 2018,19ರಲ್ಲಿ ಸಂಭವಿಸಿದ ಭೂಕುಸಿತ ಪ್ರಕರಣಗಳ ಅಧ್ಯಯನ ನಡೆಸಿದ್ದ ತಜ್ಞರ ವರದಿಯಲ್ಲಿನ ಅಂಶಗಳನ್ನು ಪ್ರಸ್ತಾಪ ಮಾಡಿದ್ದಾರೆ. ಅರಣ್ಯ ಒತ್ತುವರಿ ಮತ್ತು ಮಾನವ ಅಭಿವೃದ್ಧಿ ಚಟುವಟಿಕೆಗಳೇ ಅನಾಹುತಳಿಗೆ ಪ್ರಾಥಮಿಕ ಕಾರಣ ಎಂಬ ಉಲ್ಲೇಖ ಆ ವರದಿಯಲ್ಲಿರುವುದರಿಂದ ಪಶ್ಚಿಮಘಟ್ಟ ಭಾಗದಲ್ಲಿ ಸಂಭಾವ್ಯ ದುರಂತ ತಡೆಯಲು ಮುನ್ನೆಚ್ಚರಿಕೆ ಕ್ರಮಗಳ ಅಗತ್ಯತೆ ಇದ್ದು, ಭೂ ಪರಿವರ್ತನೆಗೆ ಕಡಿವಾಣ ಹಾಕುವುದರ ಮಹತ್ವವನ್ನು ಪ್ರತಿಪಾದಿಸಿದ್ದಾರೆ. ಈ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಪಶ್ಚಿಮಘಟ್ಟ ಸಂರಕ್ಷಣೆ ಆಗಲೇಬೇಕು. ಕಾನೂನುಬಾಹಿರ ಭೂಪರಿವರ್ತನೆಯನ್ನು ನಿಷೇಧಿಸಬೇಕು. ಪ್ರವಾಸೋಧ್ಯಮ ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿನಾಶ ಸಲ್ಲದು. ತಜ್ಞರ ಸಲಹೆಗಳನ್ನು ಸರ್ಕಾರ ಪುರಸ್ಕರಿಸಬೇಕು. ಕೊಡಗಿನಲ್ಲಿ ಸಂಭವಿಸಬಹುದಾದ ಭೂಕುಸಿತಗಳ ತಡೆಗೆ ಪರಿಹಾರಗಳನ್ನು ಕಂಡುಕೊಳ್ಳಬೇಕು.
ಸಿ.ಆರ್. ಶಶಿಕುಮಾರ್, ಸ್ವಯಂ ಉದ್ಯೋಗಿ, ಚಿಕ್ಕಮಂಡೂರು ಗ್ರಾಮ. ಗೋಣಿಕೊಪ್ಪ

ಪಶ್ಚಿಮ ಘಟ್ಟಗಳಲ್ಲಿ ಭೂ ಪರಿವರ್ತನೆ ಮಾಡುವುದರಿಂದ ಅಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಇದರಿಂದ ಅತಿಯಾಗಿ ಮಳೆ ಬರುವ ಸಂದರ್ಭ ಭೂ ಕುಸಿತಗಳು ಆಗುವುದಕ್ಕೆ ನೇರ ಕಾರಣ ಆಗುತ್ತದೆ. 2018ರಿಂದ ಪದೇ ಪದೇ ಆಗುತ್ತಿರುವ ಪ್ರಾಕೃತಿಕ ವಿಕೋಪಗಳು ಭೂ ಪರಿವರ್ತನೆಯಾದ ಕಡೆಗಳಲ್ಲಿಯೇ ಆಗಿದೆ ಎನ್ನುವುದು ಸತ್ಯ. ಪ್ರಜ್ಞಾವಂತ ಜನ ಸಾಮಾನ್ಯರು ಇದನ್ನರಿತು ಪ್ರಕೃತಿಯ ನೈಜತೆಯನ್ನು ಕಾಪಾಡಿಕೊಳ್ಳುವುದು ಒಳಿತು.
ಲಕ್ಸು ಗುಡ್ಡೇರ, ಪ್ರಗತಿಪರ ಕೃಷಿಕ, ಬಲಮುರಿ ಗ್ರಾಮ

ನಮ್ಮದು ಪ್ರಾಕೃತಿಕ ಸೌಂದರ್ಯ ಹೊಂದಿರುವ ಜಿಲ್ಲೆ. ಪರಿಸರ ಇಲ್ಲಿನ ಮೂಲ ಸಂಪತ್ತು. ಇತ್ತೀಚೆಗಿನ ದಿನಗಳಲ್ಲಿ ಅಕ್ರಮವಾಗಿ ಕೃಷಿ ಭೂಮಿ ಪರಿವರ್ತನೆ ಆಗುತ್ತಿದೆ. ಇದರಿಂದ ಪರಿಸರಕ್ಕೆ ಮಾರಕವಾಗುತ್ತದೆ. ಈಗಾಗಲೇ ನಾವು ಕಂಡು ಕೇಳರಿಯದ ಪ್ರಾಕೃತಿಕ ದುರ್ಘಟನೆಗಳು ಘಟಿಸಿವೆ. ಇನ್ನಾದರೂ ಸÀರ್ಕಾರ ಎಚ್ಚೆತ್ತುಕೊಂಡು ಇಂತಹ ಅಕ್ರಮ ಪರಿವರ್ತನೆಗಳಿಗೆ ಕಡಿವಾಣ ಹಾಕಬೇಕಿದೆ.
ಪುಚ್ಚಿಮಾಡ ರಾಯ್ ಮಾದಪ್ಪ, ರೈತ ಸಂಘ ಅಧ್ಯಕ್ಷ, ಮಾಯಮುಡಿ

ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಗೆ ತಡೆ ನೀಡುವ ನಿರ್ಧಾರ ಉತ್ತಮ ಕೆಲಸ. ಇಲ್ಲದಿದ್ದರೆ ರೆಸಾರ್ಟ್, ಹೋಂ ಸ್ಟೇ ನಿರ್ಮಾಣವನ್ನು ಅವೈಜ್ಞಾನಿಕ ರೀತಿಯಲ್ಲಿ ಮಾಡಿ ಗುಡ್ಡ ಕುಸಿತಕ್ಕೆ ಕಾರಣವಾಗುವ ಪರಿಸ್ಥಿತಿ ಸೃಷ್ಠಿಯಾಗುತ್ತದೆ. ಆದ್ದರಿಂದ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಭೂಪರಿವರ್ತನೆ ಮಾಡುವ ಮೊದಲು ಕೂಲಂಕುಷವಾಗಿ ಪರಿಶೀಲಿಸುವುದು ಉತ್ತಮ.
ಮೋಹಿತ್ ಬಿ.ಯು., ಅರಪಟ್ಟು ಗ್ರಾಮ, ವಿರಾಜಪೇಟೆ

ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಪ್ರಸ್ತಾವನೆಗಳಿಗೆ ಸದ್ಯಕ್ಕೆ ತಡೆ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿರುವುದು ಉತ್ತಮ ಬೆಳವಣಿಗೆ. ಕೊಡಗು ಭೂಕುಸಿತಕ್ಕೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ತಜ್ಞರು ನೀಡಿರುವ ಕಾರಣದಿಂದಾಗಿ ಈ ಸೂಚನೆ ನೀಡಿರುವುದು ಗಮನಾರ್ಹ. ಇತ್ತೀಚೆಗೆ ಕೆಲವೊಂದು ಕೃಷಿ ಭೂಮಿಗಳು ಮಾಯವಾಗುತ್ತಿದೆ. ಕೃಷಿ ಭೂಮಿಗಳು ಕೃಷಿ ಭೂಮಿಗಳಾಗಿ ಉಳಿಯಬೇಕು.
ಶಿಬು, ಕೃಷಿಕ, ಸಂಪಿಗೆದಾಳು, ಶನಿವಾರಸಂತೆ

ಪಶ್ಚಿಮಘಟ್ಟ ಪ್ರದೇಶದಲ್ಲಿ ಭೂ ಪರಿವರ್ತನೆಗೆ ತಡೆ ನೀಡಿರುವುದು ಸ್ವಾಗತಾರ್ಹ ಕ್ರಮ. ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಎಷ್ಟರ ಮಟ್ಟಿಗೆ ಇದೆ ಎಂದರೆ, ರಿಯಲ್ ಎಸ್ಟೇಟ್ ಮಾಫಿಯಾ ಹೀಗೆ ಮುಂದುವರಿದರೆ ಮುಂದಿನ ಕೆಲ ವರ್ಷಗಳಲ್ಲಿ ಹೊಲ, ಗದ್ದೆ, ತೋಟಗಳು ಮಾಯವಾಗಿ ಕೇವಲ ಲೇಔಟ್‌ಗಳೇ ಇರಲಿದೆ. ಒಂದು ಹಂತದ ನಂತರ ಪ್ರಕೃತಿ ತನ್ನ ಶಕ್ತಿಯನ್ನು ತೋರಿಸುತ್ತದೆ. ಇದಕ್ಕೆಲ್ಲ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಲಾಜು ನೋಡಬಾರದು.
ಸುನೀತಾ ಚಕ್ರಪಾಣಿ, ವಕೀಲರು, ಕುಶಾಲನಗರ

ಕೊಡಗು ಗುಡ್ಡಗಾಡು ಪ್ರದೇಶ. ಬೆಟ್ಟ-ಗುಡ್ಡಗಳು ಉಳಿಯಬೇಕಾದರೆ ಒಂದಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿರುವುದು ಸರ್ಕಾರದ ಕರ್ತವ್ಯ. ಜಿಲ್ಲೆಯಲ್ಲಿ ಈಗಾಗಲೇ ಪ್ರಕೃತಿ ವಿಕೋಪ ಸಂಭವಿಸಿದೆ. ಮೂಲ ಸೌಕರ್ಯದ ಹೆಸರಿನಲ್ಲಿ ಅರಣ್ಯ ನಾಶ ನಿಲ್ಲಬೇಕು. ಕೊಡಗಿನಲ್ಲಿ 2018ರಲ್ಲಿ ನಡೆದ ಭೂಕುಸಿತ ಮತ್ತು ಇದೇ ವರ್ಷ ಕೇರಳದ ವೈನಾಡಿನಲ್ಲಿ ಸಂಭವಿಸಿದ ದುರಂತವನ್ನು ಕಂಡಿದ್ದೇವೆ. ಹಾಗಾಗಿ ಪ್ರಕೃತಿ ರಕ್ಷಣೆ ಆಗಬೇಕಿದೆ.
ಪವಿತ್ರ‍್ರಾ, ವಕೀಲರು, ಸೋಮವಾರಪೇಟೆ

ಕೊಡಗಿನಲ್ಲಿ ನಿರಂತರ ಭೂ ಪರಿವರ್ತನೆ ನಡೆಯುತ್ತಲೇ ಇದ್ದು, ಕೃಷಿ ಭೂಮಿಗಳು ಲೇಔಟ್‌ಗಳಾಗಿ ಬದಲಾಗುತ್ತಿದೆ. ಪಶ್ಚಿಮ ಘಟ್ಟಗಳಲ್ಲಿ ಬೃಹತ್ ರೆಸಾರ್ಟ್ಗಳು ತಲೆ ಎತ್ತುತ್ತಿದೆ. ಈ ಸಂಬAಧ ಈಗಾಗಲೇ ಹಲವು ಹೋರಾಟಗಳು ನಡೆಯುತ್ತಿದ್ದು, ವಾಣಿಜ್ಯ ಉದ್ದೇಶಕ್ಕೆ, ರೆಸಾರ್ಟ್ಗಳನ್ನು ನಿರ್ಮಿಸಲು ಅವಕಾಶ ನೀಡಬಾರದು. ಪ್ರಾಕೃತಿಕ ವಿಕೋಪಗಳಿಗೆ ಮಾನವನ ಅಭಿವೃದ್ಧಿ ಚಟುವಟಿಕೆಗಳೇ ಕಾರಣ ಎನ್ನುವುದು ದೃಢಪಟ್ಟಿದೆ
ಕಿಶೋರ್, ಸಿದ್ದಾಪುರ ನಿವಾಸಿ

ಪಶ್ಚಿಮ ಘಟ್ಟ ಅನೇಕ ಜೀವ ವೈವಿಧ್ಯತೆಯನ್ನು ಹೊಂದಿದೆ. ಈ ಪ್ರದೇಶವನ್ನು ಮಾನವ ಹಸ್ತಕ್ಷೇಪದಿಂದ ದೂರ ಇಡಬೇಕು. ಇಲ್ಲಿ ಏರುಪೇರು ಆದರೆ ಇಡೀ ಮನುಕುಲಕ್ಕೇ ತೊಂದರೆ. ಸರ್ಕಾರ ಭೂ ಪರಿವರ್ತನೆಗೆ ನಿಷೇಧ ಹೇರಲು ಮುಂದಡಿ ಇಟ್ಟಿರುವುದು ಸ್ವಾಗತಾರ್ಹ. ಇದು ಯಾವುದೇ ಬದಲಾವಣೆ ಆಗದೆ ಮುಂದುವರೆಯಲಿ.
ವಾಣಿ ಧನೇಶ್, ಗೋಣಿಕೊಪ್ಪ ನಿವಾಸಿ

ದಕ್ಷಿಣ ಭಾರತಕ್ಕೆ ಜೀವಜಲ ನೀಡುವ ಹಲವು ನದಿಗಳ ಮೂಲವಾಗಿರುವ, ಅಪರೂಪದ ಜೀವ ವೈವಿಧ್ಯತೆಗಳನ್ನು ಹೊಂದಿರುವ ಪಶ್ಚಿಮ ಘಟ್ಟ ಸಂರಕ್ಷಿಸುವುದು ಇಂದಿನ ಅಗತ್ಯವಾಗಿದೆ. ಕರ್ನಾಟಕದಲ್ಲಿರುವ ಪಶ್ಚಿಮ ಘಟ್ಟದ ಭಾಗದಲ್ಲಿ ಭೂ ಉಪಯೋಗ ಕುರಿತು ಹೊಸ ನಿಯಮಾವಳಿ ರೂಪಿಸುವ ತನಕ ಎಲ್ಲ ಭೂ ಪರಿವರ್ತನೆ ಪ್ರಸ್ತಾವನೆಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ತಜ್ಞರು ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಮನ್ನಣೆ ಕೊಡಲಾಗುವುದು.
ಈಶ್ವರ ಬಿ. ಖಂಡ್ರೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ