ಜಿಲ್ಲೆ

ವನ್ಯಜೀವಿ ಉತ್ಪನ್ನಗಳ ಸಾಂಪ್ರದಾಯಿಕ ಸಂಗ್ರಹಕ್ಕೆ ಆತಂಕ

ಮಡಿಕೇರಿ:

ಹುಲಿಯುಗುರು ಪ್ರಕರಣದಿಂದಾಗಿ ವನ್ಯಜೀವಿ ಉತ್ಪನ್ನಗಳ ಬಳಕೆ ದೊಡ್ಡ ಸದ್ದು ಮಾಡುತ್ತಿದೆ. ಆದರೆ ಅರಣ್ಯಗಳಿಂದ ಕೂಡಿದ ಕೊಡಗಿನಲ್ಲಿ ಹಿಂದೊಮ್ಮೆ ಬೇಟೆ ಸಾಮಾನ್ಯವಾಗಿತ್ತು. ಬೆಳೆ ರಕ್ಷಣೆ, ಆಹಾರಕ್ಕಾಗಿ ಬೇಟೆ ನಡೆಯುತ್ತಿತ್ತು. ಇದೊಂದು ಸಂಪ್ರದಾಯ ಎನ್ನುವ ರೀತಿಯಲ್ಲಿ ಇಲ್ಲಿನ ಜನಜೀವನದಲ್ಲಿ ಬೇಟೆ ಹಾಸುಹೊಕ್ಕಾಗಿತ್ತು. ಹಾಗಾಗಿ ಸಾಮಾನ್ಯವಾಗಿ ಇಲ್ಲಿನ ಪ್ರತಿ ಮನೆಯಲ್ಲೂ ಪ್ರಾಣಿಗಳ ಉತ್ಪನ್ನ ಕಾಣಬಹುದು.

ಜಿಂಕೆ ಕೊಂಬುಗಳು ತಲೆ ತಲಾಂತರದಿಂದ ಮನೆಗಳಲ್ಲಿ ಅಲಂಕಾರಿಕ ವಸ್ತುಗಳಾಗಿ ಬಳಕೆಯಾಗುತ್ತಿದೆ. ಚಿಂಕೆಯ ಚರ್ಮಗಳೂ ಗ್ರಾಮೀಣ ಭಾಗದಲ್ಲಿ ಬಳಕೆಯಲ್ಲಿದೆ. ಪಾರಂಪರಿಕ ವಾದ್ಯಗಳ ತಯಾರಿಕೆಗೆ ಪ್ರಾಣಿಗಳ ಚರ್ಮ ಬಳಸಲಾಗಿದೆ. ಆನೆಯ ಲದ್ದಿ ಔಷಧವಾಗಿ ಉಪಯೋಗವಾದರೆ, ಆನೆ ಬಾಲದ ಕೂದಲು ಕೈ ಉಂಗುರಕ್ಕೆ ಬಳಕೆಯಾಗುತ್ತಿತ್ತು. ಆನೆ ಹಲ್ಲನ್ನು ಕಲ್ಲಿನಲ್ಲಿ ಅರೆದು ಗಾಯದ ಊತಕ್ಕೆ ಬಳಸುತ್ತಿದ್ದರು. ಕೊಡಗಿನಲ್ಲಿ ಹುಲಿ ಕೊಂದವರ ಜತೆ ಹುಲಿ ಮದುವೆ ಎನ್ನುವ ಆಚರಣೆಯೂ ನಡೆಯುತ್ತಿತ್ತು.

ಹಾಗಾಗಿ ಬಹಳ ಹಿಂದಿನಿಂದಲೂ ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ಸಂರಕ್ಷಿಸಲ್ಪಟ್ಟ ಮತ್ತು ಉಪಯೋಗಿಸಲ್ಪಟ್ಟ ವನ್ಯ ಜೀವಿಗಳ ಉತ್ಪನ್ನಗಳ ವಿಷಯದಲ್ಲಿ ಕೊಡಗಿನ ಜನರಲ್ಲಿ ಆತಂಕ ಮತ್ತು ಗೊಂದಲ ಈಗ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಿಯಪ್ಪ ನೇತೃತ್ವದ ನಿಯೋಗ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಭೇಟಿ ಮಾಡಿ ರಾಜ್ಯದ ಜನಸಾಮಾನ್ಯರಲ್ಲಿ ಬೆಂಗಳೂರಿನ ಅರಣ್ಯಾಧಿಕಾರಿಗಳು ಸೃಷ್ಟಿಸಿದ ಆತಂಕ ಮತ್ತು ಗೊಂದಲದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಈ ಬಗ್ಗೆ ವಿಜಯವಾಣಿ ಓದುಗರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿದೆ.

ವನ್ಯಪ್ರಾಣಿಗಳನ್ನು ಆಹಾರಕ್ಕಾಗಿ ಬೇಟೆಯಾಡಿ ಕೊಲ್ಲುವುದು ತಪ್ಪು. ಜನರಲ್ಲಿ ಅರಿವು ಮೂಡಿಸಬೇಕು. ಜನರು ಬದಲಾಗಬೇಕು. ಕಾನೂನು ಪಾಲನೆ ಮಾಡಬೇಕು. ಸ್ವಾತಂತ್ರ್ಯ ಪೂರ್ವದಲ್ಲೇ ವನ್ಯಪ್ರಾಣಿಗಳ ಕೊಂಬು, ಹುಲಿ ಉಗುರುಗಳನ್ನು ಆಲಂಕಾರಿಕ ವಸ್ತುಗಳಾಗಿ ಸಂಗ್ರಹ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಕಾನೂನು ಕ್ರಮ ಬೇಡ. ಅವರಿಗೆ ಅರಿವು ಮೂಡಿಸಿ, ಸರ್ಕಾರ ತಮ್ಮ ಸುಪರ್ದಿಗೆ ತೆಗೆದುಕೊಳ್ಳಲಿ.
ಪೂರ್ಣಿಮಾ ಗೋಪಾಲ್, ಅಧ್ಯಕ್ಷೆ, ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ, ಸೋಮವಾರಪೇಟೆ.

ಜನರು ವನ್ಯಜೀವಿಗಳ ಉತ್ಪನ್ನಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು. ಈ ಬಗ್ಗೆ ಜನ ಜಾಗೃತಿ ನಡೆಯಬೇಕು. ಉತ್ಪನ್ನಗಳಿಗೆ ಬೇಡಿಕೆ ಜಾಸ್ತಿಯಾದರೆ, ವನ್ಯಪ್ರಾಣಿಗಳ ಹತ್ಯೆ ಹೆಚ್ಚಾಗುತ್ತದೆ. ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಬೇಕು. ಕೊಡಗಿನಲ್ಲಿ ಬೇಟೆ ಸಂಪ್ರಾದಾಯ ಕಡಿಮೆಯಾಗಬೇಕು.
ಗೌತಮ್ ಕಿರಗಂದೂರು, ಕಾಫಿ ಬೆಳೆಗಾರ, ಸೋಮವಾರಪೇಟೆ.

ಕೊಡಗು ಜಿಲ್ಲೆಯಲ್ಲಿ ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಶ್ರೀಮಂತರ ಮನೆಗಳಲ್ಲಿ ಹುಲಿ ಉಗುರು, ಜಿಂಕೆ ಕೊಂಬು, ಆನೆ ಕೂದಲು ಇದ್ದೇ ಇರುತ್ತಿತ್ತು. ಹಿರಿಯರಿಂದ ಬಂದ ಬಳುವಳಿಗೂ ಈಗ ಅರಣ್ಯ ಇಲಾಖೆ ಅನಾವಶ್ಯಕ ತೊಂದರೆ ಕೊಡುತ್ತಿದೆ. ತುಂಬಾ ಹಳೆಯ ವನ್ಯಜೀವಿ ಉತ್ಪನಗಳಿದ್ದರೆ ನೋಂದಣಿ ಮಾಡಿಸಿಕೊಂಡು ಬಿಟ್ಟರೆ ಒಳ್ಳೆಯದು.
ನಾಗ ಪ್ರವೀಣ್, ವರ್ತಕ, ಕುಶಾಲನಗರ.

ಕೊಡಗು ಕಾಡಿನಿಂದ ಆವೃತವಾದ ಜಿಲ್ಲೆ. ಈ ಹಿಂದಿನಿಂದಲೂ ಇಲ್ಲಿ ಬೇಟೆ ನಿರಂತರವಾಗಿತ್ತು. ಬೇಟೆಯಾಡಿದ ಪ್ರಾಣಿಗಳ ಚರ್ಮ, ಉಗುರುಗಳನ್ನು ಸಂರಕ್ಷಿಸಿ ಇಡುತ್ತಿದ್ದರು. ಆದರೆ ಇತ್ತೀಚಿಗಿನ ದಿನದಲ್ಲಿ ವನ್ಯಜೀವಿ ಕಾಯ್ದೆ ಬಂದ ಮೇಲೆ ಈ ತರಹದ ಬೇಟೆ ಮತ್ತು ಸಂಗ್ರಹ ಕಡಿಮೆಯಾಗಿದೆ. ಹಿಂದಿನ ಕಾಲದಿಂದಲೂ ಕೆಲವು ಮನೆಗಳಲ್ಲಿ ಪ್ರಾಣಿಗಳ ವಸ್ತುಗಳು ಇದ್ದೇ ಇದೆ. ಅದನ್ನೇ ನೆಪ ಮಾಡಿಕೊಂಡು ಅವರಿಗೆ ತೊಂದರೆ ಕೊಡುವುದು ಸರಿಯಲ್ಲ. ಇತ್ತೀಚೆಗೆ ಬೇಟೆ ಆಡಿದರೆ ಅವರಿಗೆ ಶಿಕ್ಷ ನೀಡುವಂತಾಗಬೇಕು.
ಭವ್ಯಾ, ಉಪನ್ಯಾಸಕಿ, ಗೋಣಿಕೊಪ್ಪ

ವನ್ಯಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕೊಡಗಿನಲ್ಲಿ ಹಿರಿಯರು ಬೇಟೆ ಮಾಡುತ್ತಿದ್ದರು. ಆಗ ಉಗುರು, ಚರ್ಮ ಮತ್ತಿತರ ವಸ್ತುಗಳನ್ನು ಮನೆಯಲ್ಲಿ ಅಲಂಕಾರಿಕ ವಸ್ತುಗಳನ್ನಾಗಿ ಮಾಡಿ ಇಡುತ್ತಿದ್ದರು. ಆದರೆ ಇತ್ತೀಚೆಗೆ ಇದೇ ನೆಪದಲ್ಲಿ ಕಾನೂನು ಜಾರಿಯಾಗುತ್ತಾ ಎಲ್ಲರಿಗೂ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಇಲ್ಲಿ ರೈತರು ಪ್ರತಿನಿತ್ಯ ವನ್ಯಪ್ರಾಣಿಗಳ ಹಾವಳಿಯಿಂದ ತತ್ತರಿಸಿ ಹೋಗಿದ್ದಾರೆ. ಮೊದಲು ಅದನ್ನು ಪರಿಹರಿಸುವ ಮಾರ್ಗೋಪಾಯ ಕಂಡುಕೊಳ್ಳಲಿ.
ಜಯಪ್ರಕಾಶ್ ಮೂಲೆಮನೆ, ಗೋಣಿಕೊಪ್ಪ

ಕೊಡಗಿನಲ್ಲಿ ಪ್ರತಿ ಮನೆಗಳಲ್ಲಿ ಹಾಗೂ ದೇವಾಲಯದ ಕಾರ್ಯಗಳಲ್ಲಿ ಹಿಂದಿನ ಕಾಲದ ಪ್ರಾಣಿಗಳ ಉತ್ಪನ್ನಗಳನ್ನು ಕಾಣಬಹುದು. ಪಾರಂಪರಿಕವಾಗಿ ಪುರಾತನ ಕಾಲದಿಂದ ಸಾಂಪ್ರದಾಯಿಕವಾಗಿ ಸಂರಕ್ಷಿಸಲ್ಪಟ್ಟ, ಉಪಯೋಗಿಸಲ್ಪಟ್ಟ ವನ್ಯ ಜೀವಿಗಳ ಉತ್ಪನ್ನಗಳ ವಿಷಯದಲ್ಲಿ ಕೊಡಗಿನ ಮೂಲ ನಿವಾಸಿಗಳಿಗೆ ಆತಂಕ ಮತ್ತು ಗೊಂದಲವಿದೆ. ಇದರ ಬಗ್ಗೆ ಅರಣ್ಯ ಇಲಾಖೆ ಸಂಕ್ಷಿಪ್ತವಾಗಿ ತಿಳಿಸಬೇಕಾಗಿದೆ ಹಾಗೂ ಜಾಗೃತಿ ಮೂಡಿಸಬೇಕಾಗಿದೆ.
ಚೇಂದಂಡ ಚಿಮ್ಮಿ ಪೂವಯ್ಯ, ರಿವರ್ ಸೈಡ್ ಎಸ್ಟೇಟ್, ಸಿದ್ದಾಪುರ

ಕೊಡಗಿನಲ್ಲಿ ಮೊದಲಿನಿಂದಲೂ ವನ್ಯಜೀವಿಗಳ ಉತ್ಪನ್ನಗಳ ಬಳಕೆ ಇತ್ತು. ಹುಲಿ ಬೇಟೆಯಾಡಿ ಕೊಂದು ಹುಲಿ ಮೃತದೇಹದೊಳಗಿನ ಭಾಗ ತೆಗೆದು ಅದರೊಳಗೆ ಭತ್ತದ ಹೊಟ್ಟು ತುಂಬಿ ಹುಲಿ ಪ್ರತಿಕೃತಿ ಜತೆ ಹುಲಿ ಮದುವೆ ಮಾಡಲಾಗುತ್ತಿತ್ತು. ಜಿಂಕೆ ಕೊಂಬು, ನವಿಲು ಗರಿ ಬಳಕೆಯೂ ಇತ್ತು. ಆನೆ ಹಲ್ಲು ಅರೆದು ಗಾಯದ ಊತಗಳಿಗೆ ಲೇಪಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ವನ್ಯಪ್ರಾಣಿಗಳ ಸುದ್ದಿಗೆ ಹೋಗದಿರುವುದೇ ಒಳ್ಳೆಯದು.
ಚಂಡೀರ ಕೆ. ಮುದ್ದಪ್ಪ, ನಿವೃತ್ತ ನಿರೀಕ್ಷಕ, ಬಿಎಸ್‌ಎಫ್, ಕೋಕೇರಿ, ಚೆಯ್ಯಂಡಾಣೆ

ಹುಲಿ ಉಗುರು ಧರಿಸುವುದರಿಂದ ಕೆಲವು ಗ್ರಹಚಾರಗಳು, ಕ್ಷುದ್ರ ಶಕ್ತಿಗಳು ನಾಶವಾಗುತ್ತವೆ ಎಂಬ ನಂಬಿಕೆ ಹಿಂದಿನ ಕಾಲದಿಂದಲೂ ಜನರಲ್ಲಿ ಇದ್ದು, ಕಾನೂನು ಅರಿವು ಇಲ್ಲದೆ ಕೆಲವರು ಇದನ್ನು ಧರಿಸುತಿದ್ದಾರೆ. ಅರಣ್ಯ ಇಲಾಖೆಯವರು ಸಂಘ-ಸಂಸ್ಥೆಗಳ ಸಹಕಾರದಿಂದ ಕಾನೂನು ಅರಿವು ಮೂಡಿಸುವ ಅಭಿಯಾನ ಆರಂಭಿಸಿ ಇಂತಹ ಮೂಢನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನಿಸಬೇಕೇ ಹೂರತು ಹುಲಿಯನ್ನೇ ಕೊಂದಿದ್ದಾರೆ ಎಂಬ ರೀತಿಯಲ್ಲಿ ನೇರವಾಗಿ ಬಂಧಿಸಿ ಜೈಲಿಗೆ ಹಾಕುವುದು ಸರಿಯಲ್ಲ.
ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ

ಮಾಲೀಕತ್ವದ ಹಕ್ಕು ಪಡೆದುಕೊಳ್ಳದ ಅಕ್ರಮ ದಾಸ್ತಾನಿನ ಹುಲಿ ಉಗುರಿನ ಪೆಂಡೆಂಟ್, ಆನೆ ಬಾಲದ ಕೂದಲಿನ ಉಂಗುರ ಇತ್ಯಾದಿ ವನ್ಯ ಮೃಗದ ಅಂಗಾಂಗದ ಉತ್ಪನ್ನ ಧರಿಸುವುದು, ಹುಲಿ ಚರ್ಮ, ಜಿಂಕೆ ಕೊಂಬು ಇಟ್ಟುಕೊಳ್ಳುವದು ವನ್ಯಜೀವಿ ಸಂರಕ್ಷಣಾ ಕಾಯಿದೆ ೧೯೭೨ರ ರೀತ್ಯ ಶಿಕ್ಷಾರ್ಹ ಅಪರಾಧವಾಗಿದ್ದು ೩ರಿಂದ ೭ ವರ್ಷದವರೆಗೆ ಶಿಕ್ಷೆಯೂ ಆಗಬಹುದು. ಈ ನೆಲದ ಕಾನೂನು ಎಲ್ಲರಿಗೂ ಒಂದೇ. ಯಾರೇ ತಪ್ಪು ಮಾಡಿದ್ದರೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ನಮ್ಮ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ.
ಈಶ್ವರ ಬಿ. ಖಂಡ್ರೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ