ಜಿಲ್ಲೆ

ಉಜ್ವಲ ಭವಿಷ್ಯಕ್ಕೆ ಏಕಾಗ್ರತೆಯೇ ಸಾಧನ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ದುಶ್ಚಟಗಳಿಗೆ ಅಂಟಿಕೊಳ್ಳದೆ ಅಧ್ಯಯನದಲ್ಲಿ ಏಕಾಗ್ರತೆ ವಹಿಸಿ ಭವಿಷ್ಯದ ಜೀವನ ಉಜ್ವಲವಾಗಿಸಿಕೊಳ್ಳಲಿ ಎಂದು ಜ್ಯೋತಿಷಿ ರಂಗನಾಥ ಜೋಶಿ ಹೇಳಿದರು.

ಮಾಳಮಡ್ಡಿ ಕೆ.ಇ. ಬೋಡಿರ್ನ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನದೇ ಆದ ಸಾಮರ್ಥ್ಯ ಇರುತ್ತದೆ. ಶಿಕ್ಷಣವನ್ನು ಇಷ್ಟಪಟ್ಟು ಓದಿ ಜ್ಞಾನಾರ್ಜನೆ ಮಾಡಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ ಹೊಂದಿದವರಿಗೆ ಮಾತ್ರ ಉದ್ಯೋಗಾವಕಾಶಗಳು ದೊರೆಯುತ್ತವೆ. ವಿದ್ಯಾರ್ಥಿ ಜೀವನದಲ್ಲಿ ಬರುವ ಎಲ್ಲ ಪರೀಕ್ಷೆಗಳನ್ನು ನಿಮ್ಮ ಅಭಿವೃದ್ಧಿಗೋಸ್ಕರ ಎಂದು ತಿಳಿದು ಪರೀಕ್ಷೆಗಳನ್ನು ಬರೆಯಬೇಕು. ಸನಾತನ ಧರ್ಮ, ಆಯುರ್ವೇದ ಹಾಗೂ ಪ್ರಾಚಿನ ಕಾಲದ ಶಿಕ್ಷಣ ಪದ್ಧತಿ ಮಹತ್ವ ತಿಳಿಸಿದ ಅವರು, ತಂದೆ-ತಾಯಿ, ಗುರು ಹಾಗೂ ಹಿರಿಯರಿಗೆ ವಿಧೇಯಕರಾಗಿರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸುನಿತಾ ಕಡಪಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು.

ವಸಂತ ಮುರ್ಡೇಶ್ವರ, ಎನ್​.ಎಸ್​. ಗೋವಿಂದರೆಡ್ಡಿ, ಎಸ್​.ಐ. ವಕ್ಕುಂದ, ಹನಮಂತಪ್ಪ ಕಳಸಪ್ಪನವರ, ನಾಗರಾಜ ಇಟಗಿ, ಸಮೀನಾ ಶೇಖ, ಇತರರು ಇದ್ದರು. ಎಸ್​.ಎಲ್​. ಶೇಖರಗೋಳ ಸ್ವಾಗತಿಸಿದರು. ಸುಮಾ ಬಿಸಗುಪ್ಪಿ ವಂದಿಸಿದರು.