ವಿಜಯವಾಣಿ ಸುದ್ದಿಜಾಲ ಧಾರವಾಡ
ಕುಶಲ ಕರ್ಮಿಗಳಿಗೆ ಏಕಾಗ್ರತೆ ಹಾಗೂ ಸಮನ್ವಯತೆ ಮುಖ್ಯ. ಕುಶಲಕರ್ಮಿಗಳು ಉತ್ಪಾದಿಸುವ ವಸ್ತುಗಳಲ್ಲಿ ಚಲನಶೀಲ ತತ್ವವಿದೆ ಎಂದು ಹೊಸಪೇಟೆಯ ಸಾಂಸ್ಕೃತಿಕ ಚಿಂತಕ ರೆಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ದೇವರ ದಾಸಿಮಯ್ಯ ಜಯಂತಿ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೇಕಾರ ಸಂಸ್ಕೃತಿ ಹಾಗೂ ಧರ್ಮ(ದಾಸಿಮಯ್ಯ, ಕಬೀರ ಹಾಗೂ ಭೀಮಾಂಭಿಕೆ) ಕುರಿತು ಮಾತನಾಡಿದರು.
ಕಲ್ಯಾಣ ಪಟ್ಟಣದಲ್ಲಿ ಸಾಮಾನ್ಯ ವ್ಯಕ್ತಿಗಳು ಗುರುದೀಕ್ಷೆ ಪಡೆದು ಅಸಮಾನ್ಯ ಸಾಧಕರಾಗಿ ಬೆಳೆದರು. ಕಲ್ಯಾಣ ಪಟ್ಟಣ ಕುಶಲಕರ್ಮಿಗಳ ಕೇಂದ್ರವಾಗಿತ್ತು. ಕುಶಲಕರ್ಮಿಗಳಲ್ಲಿ ಕಾಯಕ ನಿಷ್ಠೆ ಇತ್ತು. ನೇಕಾರಿಕೆಯಂತಹ ವೃತ್ತಿಯಲ್ಲಿ ಸಮನ್ವಯತೆ ಬಹಳ ಮುಖ್ಯ. ಸಾಮರಸ್ಯದಿಂದ ಮಾತ್ರ ಗುಣಮಟ್ಟದ ವಸ್ತುಗಳು ಉತ್ಪಾದನೆ ಮಾಡಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಶಾಂತಾ ಇಮ್ರಾಪುರ ಮಾತನಾಡಿ, ದೇವರ ದಾಸಿಮಯ್ಯ ಶರಣ ಸಂಸ್ಕೃತಿಯಲ್ಲಿ ಮುಂದಿನ ವಚನಕಾರರಿಗೆ ವೈಚಾರಿಕತೆಯ ಬೀಜ ಬಿತ್ತಿದರು. ಅವರ ಚಿಂತನೆಗಳು ಸಮಾಜದಲ್ಲಿ ಸಮಾನತೆ, ಕಾಯಕ ನಿಷ್ಠೆ, ಕಲ್ಪನೆ ತಂದುಕೊಟ್ಟವು. ವಚನ ಚಳವಳಿಗೆ ತಾತ್ವಿಕ ನೆಲೆಗಟ್ಟು ತಂದುಕೊಟ್ಟವರೇ ದೇವರ ದಾಸಿಮಯ್ಯ ಎಂದರು.
ರಾಮಚಂದ್ರ ಗೆದ್ದೆಣ್ಣವರ ದತ್ತಿ ಆಶಯ ಕುರಿತು ಮಾತನಾಡಿದರು. ಬಸವಪ್ರಭು ಹೊಸಕೇರಿ, ಡಾ. ಧನವಂತ ಹಾಜವಗೋಳ, ಐ.ಜಿ. ಸನದಿ, ನಿಂಗಣ್ಣ ಕುಂಟಿ, ಸುರೇಶ ಭಂಡಾರಿ, ಇತರರು ಇದ್ದರು.
ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ವಡ್ಡೀನ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು.