ಜಿಲ್ಲೆ

ಹಾಲು ಉತ್ಪಾದಕರ ಸಹಕಾರ ಸಂಘಗಳ ಗಣಕೀಕರಣ

ರಾಜಣ್ಣ

ಪಾಂಡವಪುರ: ಸರ್ಕಾರ ಮತ್ತು ಸಹಕಾರ ಸಂಘಗಳ ಇಲಾಖೆಯ ಆದೇಶದಂತೆ ತಾಲೂಕಿನ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಗಣಕೀಕೃತಗೊಳಿಸಿ ಆನ್‌ಲೈನ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.


ಪಟ್ಟಣದ ಮನ್‌ಮುಲ್ ಉಪ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 26 ಡೇರಿಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಕಾಮನ್ ಸಾಫ್ಟ್‌ವೇರ್ ಅಳವಡಿಕೆಗಾಗಿ ಕಂಪ್ಯೂಟರ್, ಬ್ಯಾಟರಿ ಹಾಗೂ ಯುಪಿಎಸ್‌ಗಳನ್ನು ವಿತರಣೆ ಹಾಗೂ ವಿವಿಧ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.


ಸರ್ಕಾರ ಎಲ್ಲ ಡೇರಿಗಳಲ್ಲೂ ಕಡ್ಡಾಯವಾಗಿ ಕಾಮನ್ ಸಾಫ್ಟ್‌ವೇರ್ ಅಳವಡಿಕೆ ಮಾಡಿ ಆನ್‌ಲೈನ್ ಮೂಲಕವೇ ಹಾಲು ಖರೀದಿಸಬೇಕು ಎಂಬುದಾಗಿ ಸುತ್ತೋಲೆ ಹೊರಡಿಸಿದೆ. ಅದರಂತೆ ಜಿಲ್ಲೆಯ ಎಲ್ಲ ಡೇರಿಗಳಲ್ಲೂ ಆನ್‌ಲೈನ್ ಅಳವಡಿಕೆಗೆ ಕ್ರಮ ಕೈಗೊಂಡು ಈ ಮೂಲಕವೇ ಹಾಲು ಖರೀದಿಸಿ ಜಿಡ್ಡಿನ ಆಧಾರದ ಮೇಲೆ ದರ ನಿಗದಿ ಮಾಡಲಾಗುತ್ತಿದೆ. ಇದರಿಂದ ಡೇರಿಗೆ ಬರುವ ಕಳಪೆ ಹಾಲು ತಡೆಗಟ್ಟಬಹುದಾಗಿದೆ. ಜತೆಗೆ ಜಿಡ್ಡಿನ ಮೇಲೆ ಹಾಲಿನ ದರ ನೀಡಲು ಅನುಕೂಲವಾಗಲಿದೆ. ಕಾಮನ್ ಸಾಫ್ಟ್‌ವೇರ್ ಯಂತ್ರೋಪಕರಣಗಳ ಬೆಲೆ 1.88 ಲಕ್ಷ ರೂ.ಇದ್ದು, ಶೇ.50ರಷ್ಟು ಹಣವನ್ನು ಒಕ್ಕೂಟವೇ ಭರಿಸಲಿದೆ. ಉಳಿಕೆ ಹಣವನ್ನು ಡೇರಿ ಆಡಳಿತ ಮಂಡಳಿ ಕಂತಿನ ರೂಪದಲ್ಲಿ ಪಾವತಿಸಬೇಕು ಎಂದರು.


ಈಗಾಗಲೇ ತಾಲೂಕಿನ ಹಲವು ಸಂಘಗಳಲ್ಲಿ ಸಾಫ್ಟ್‌ವೇರ್ ಅಳವಡಿಕೆ ಮಾಡಲಾಗಿದೆ. ಇದೀಗ ಹೊಸದಾಗಿ 26 ಸಂಘಗಳಿಗೆ ಕಂಪ್ಯೂಟರ್ ವಿತರಣೆ ಮಾಡಲಾಗುತ್ತಿದೆ. ಕಾರ್ಯದರ್ಶಿಗಳು ಆನ್‌ಲೈನ್ ಅಳವಡಿಸಿಕೊಂಡರೆ ಪಕ್ಷಪಾತ ಮಾಡುತ್ತಾರೆ ಎಂಬ ಆರೋಪದಿಂದ ತಪ್ಪಿಸಿಕೊಳ್ಳಬಹುದು. ರಾಜ್ಯದ 14 ಒಕ್ಕೂಟಗಳ ಪೈಕಿ ಮಂಡ್ಯ ಒಕ್ಕೂಟಕ್ಕೆ ಅಧಿಕ ಹಾಲು ಪೂರೈಕೆಯಾಗುತ್ತಿದೆ. ಬಂದ ಹಾಲು ಉಳಿಯದಂತೆ ಮಾರಾಟವಾದರೆ ಅಧಿಕ ಲಾಭ ಗಳಿಸಬಹುದು. ಆದರೆ ಮಾರಾಟವಾಗದೆ ಪೌಡರ್‌ಗೆ ಪರಿವರ್ತಿಸಿ ಮಾರಾಟ ಮಾಡಿದರೆ ಒಕ್ಕೂಟಕ್ಕೆ ನಷ್ಟವಾಗಲಿದೆ. ಆದ್ದರಿಂದ ಅಕ್ಟೋಬರ್‌ನಿಂದ ದೆಹಲಿಗೆ 1ರಿಂದ 2 ಲಕ್ಷ ಲೀಟರ್ ಪೂರೈಕೆ ಮಾಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.


ಮನ್‌ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ತಾಲೂಕಿನಲ್ಲಿ 148 ಡೇರಿಗಳಿದ್ದು, ಈಗಾಗಲೇ ಬಿಎಂಸಿ ಕೇಂದ್ರಗಳಲ್ಲಿ ಸಾಫ್ಟ್‌ವೇರ್ ಅಳವಡಿಸಲಾಗಿದೆ. ಇದೀಗ 26 ಡೇರಿಗಳಿಗೆ ಕಂಪ್ಯೂಟರ್ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಡೇರಿಗಳಲ್ಲೂ ಅಳವಡಿಕೆ ಮಾಡಲಾಗುವುದು ಎಂದರು.


ಇದೇ ವೇಳೆ ವಿಮೆ ಯೋಜನೆ ಹಾಗೂ ರೈತ ಕಲ್ಯಾಣ ಟ್ರಸ್ಟ್ ನಿಂದ 4.05ಲಕ್ಷ ರೂ.ಪರಿಹಾರದ ಚೆಕ್ ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗ ವಿಸ್ತರಣಾಧಿಕಾರಿ ನಾಗೇಂದ್ರಕುಮಾರ್ ಇತರರು ಹಾಜರಿದ್ದರು.