ಜಿಲ್ಲೆ

ಹುಲ್ಲಹಳ್ಳಿ ನಾಡಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಸೂಸೈಡ್: ಮೇಲಧಿಕಾರಿಗಳ ಕಿರುಕುಳವೆಂದು ಆರೋಪಿಸಿದ ಸಹದ್ಯೋಗಿಗಳು

ಕೆ.ಎನ್.ರಾಘವೇಂದ್ರ

ಮಂಡ್ಯ: ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ನಾಡ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಂಪ್ಯೂಟರ್ ಆಪರೇಟರ್ ಎಚ್.ಎಸ್.ಪರಮೇಶ ಎಂಬುವರು ಮೇಲಧಿಕಾರಿ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ನಾಡಕಚೇರಿ ಕಂಪ್ಯೂಟರ್ ಆಪರೇಟರ್‌ಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಕಂಪ್ಯೂಟರ್ ಆಪರೇಟರ್‌ಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಿದರು. ಜತೆಗೆ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಿ ತಪಿತಸ್ಥ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಮೇಲಧಿಕಾರಿ ನೀಡಿದ ಕೆಲಸದ ಒತ್ತಡ ಹಾಗೂ ಅವಮಾನದಿಂದ ಬೇಸತ್ತು ಪರಮೇಶ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೂ ಮುನ್ನ ಡೆತ್‌ನೋಟ್ ಬರೆದಿದ್ದಾರೆ ಎಂದು ಹೇಳಿದರು.

ಕಳೆದ 12 ವರ್ಷದಿಂದ ಅವರು ಕಂಪ್ಯೂಟರ್ ಆಪರೇಟರ್ ಕೆಲಸ ಮಾಡುತ್ತಿದ್ದರು. ನಾಡಕಚೇರಿ ಉಪ ತಹಸೀಲ್ದಾರ್ ಶಿವಕುಮಾರ್ ನೀಡಿದ ಕಿರುಕುಳ ಹಾಗೂ ವೈಯಕ್ತಿಕ ದ್ವೇಷದಿಂದ ಮಾಡಿದ ಅವಮಾನದಿಂದ ಆತ್ಯಹತ್ಯೆ ಮಾಡಿಕೊಂಡಿರುತ್ತಾರೆ. ಆದ್ದರಿಂದ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮೃತನ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಎ.ಎಸ್.ಕೀರ್ತಿಪ್ರಸಾದ್, ಎಂ.ಹರೀಶ್, ಮಹೇಶ್, ಗಿರೀಶ್‌ಕುಮಾರ್, ಪಂಕಜಾ, ಕೆ.ಆಶಾರಾಣಿ, ರಮಾಮಣಿ, ಚಾಂದಿನಿ, ವಿದ್ಯಾ ಇತರರಿದ್ದರು.