ಜಿಲ್ಲೆ

ಸ್ವಾವಲಂಬನೆ ಸಾಧಿಸಲು ಮಹಿಳೆಗೆ ಶಿಕ್ಷಣ ಅಗತ್ಯ

ಎ. ಆರ್. ರಘುರಾಮ

ಅರಸೀಕೆರೆ ಗ್ರಾಮಾಂತರ: ಸಮಾಜಮುಖಿಯಾಗಿ ಜೀವನ ನಡೆಸಲು ಮಹಿಳೆಯರಿಗೆ ಶಿಕ್ಷಣ ಅತ್ಯಗತ್ಯ ಎಂದು ಬೆಂಗಳೂರಿನ ‘ಅವಳಿಗೋಸ್ಕರ ಸಮಾಜ’ ಸಂಸ್ಥೆಯ ಅಧ್ಯಕ್ಷೆ ಹರ್ಷಿಣಿ ವೆಂಕಟೇಶ ಹೇಳಿದರು.

ರಂಗಾಪುರ ಕಾವಲು ಮೊರಾರ್ಜಿ ವಸತಿ ಶಾಲೆಗೆ ಶುಕ್ರವಾರ 3 ಲಕ್ಷ ರೂ. ಮೌಲ್ಯದ 6 ಕಂಪ್ಯೂಟರ್ ಕೊಡುಗೆ ನೀಡಿದ ನಂತರ ಅವರು ಮಾತನಾಡಿದರು. ಶಾಲೆಯ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ನಮ್ಮ ಸಂಸ್ಥೆಯು ಪರಿಕರ ನೀಡಲು ಮುಂದಾಗಿದೆ ಎಂದರು.

ಸಮಾಜದ ಅಭ್ಯುದಯದಲ್ಲಿ ಹೆಣ್ಣಿನ ಪಾತ್ರ ಅಪಾರ. ಸಮಾಜ ಮತ್ತು ಕುಟುಂಬಕ್ಕೆ ಹೊರೆಯಾಗಿ ಹೆಣ್ಣು ಬದುಕುತ್ತಿದ್ದ ಕಾಲ ಈಗ ಬದಲಾಗಿದೆ, ಶಿಕ್ಷಣದಿಂದ ಸಬಲಳಾದ ಹೆಣ್ಣು ಸಮಾಜಮುಖಿಯಾಗಿ ಬದುಕಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಹೆಣ್ಣುಮಕ್ಕಳ ದುಡಿಮೆ ಹಣವನ್ನು ಸಮಾಜದ ಒಳಿತಿಗೆ ವಿನಿಯೋಗಿಸುತ್ತಿದೆ ಎಂದರು. ಶಿಕ್ಷಣವು ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ಅದರಲ್ಲೂ ವಿಶೇಷವಾಗಿ ಶಿಕ್ಷಣ ಪಡೆದ ಹೆಣ್ಣು ಮಕ್ಕಳು ವಿವಿಧ ರಂಗದಲ್ಲಿ ವಿಭಿನ್ನ ಸಾಧನೆ ಮಾಡುತ್ತಾ ಸಬಲತೆಯನ್ನು ಸಾಬೀತು ಮಾಡಿದ್ದಾರೆ. ಇಂದಿನ ಆಧುನಿಕ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿನಿಯರು ಭವಿಷ್ಯವನ್ನು ರೂಪಿಸಿಕೊಳ್ಳಲು ಅಗತ್ಯವಾದ ಶಿಕ್ಷಣದ ಕಡೆಗೆ ಗಮನ ಹರಿಸಬೇಕು ಎಂದರು. ಪ್ರಾಂಶುಪಾಲ ಸಂತೋಷ್, ನಿಲಯಪಾಲಕರಾದ ದಯಾನಂದ, ಶಾಲಿನಿ, ಕವಿತಾ, ಸಮಾಜ ಸೇವಕ ತೇಜಸ್ ಯಾದಾಪುರ, ಶಿಕ್ಷಕರಾದ ಸುದರ್ಶನ್, ಸಂತೋಷ್, ದಯಾನಂದ್, ಅರಿಹಂತ್ ಕುಮಾರ್, ಲೋಹಿತ್ ಇತರರು ಉಪಸ್ಥಿತರಿದ್ದರು.