ಹೊಳಲೂರಿನ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಬಿಇಒ ನಾಗರಾಜ್ ನೇತೃತ್ವದ ತಂಡ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುತ್ತಿರುವುದು.  
ಜಿಲ್ಲೆ

ಶಿಕ್ಷಕಿಗೆ ಕಡ್ಡಾಯ ರಜೆ ಶಿಕ್ಷೆ

ಹೊಳೆಹೊನ್ನೂರು: ಬಿಸಿಯೂಟಕ್ಕೆ ಕೊಳೆತ ತರಕಾರಿ ಬಳಸಿದ ಹೊಳಲೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆಯ ಮುಖ್ಯಶಿಕ್ಷಕಿ ವೀರಮ್ಮ ಅವರಿಗೆ ಶೋಕಾಸ್ ನೋಟಿಸ್ ನೀಡಿ ರಜೆಯ ಮೇಲೆ ಕಳುಹಿಸಲಾಗಿದೆ.
ಶಾಲೆಯಲ್ಲಿ ಕೊಳೆತ ತರಕಾರಿ ಬಳಸಿ ಅಡುಗೆ ತಯಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಶಿವಮೊಗ್ಗ ಬಿಇಒ ನಾಗರಾಜ್ ನೇತೃತ್ವದ ತಂಡ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕೊಳೆತ ತರಕಾರಿಗಳ ಫೋಟೋ ತೆಗೆದು ವೈರಲ್ ಮಾಡಿದ ಆರೋಪಕ್ಕೆ ಗ್ರಾಮಸ್ಥನ ಮೇಲೆ ಪ್ರಕರಣ ದಾಖಲಿಸಲು ಮುಂದಾಗಿರುವ ಮುಖ್ಯಶಿಕ್ಷಕಿ ವೀರಮ್ಮ ನಮ್ಮೂರ ಶಾಲೆಗೆ ಬೇಡ. ಶಿಕ್ಷಣಾಧಿಕಾರಿ ಬರುವವರೆಗೂ ಶಾಲೆಯ ಬಾಗಿಲು ತೆರೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಗ್ರಾಮಸ್ಥರ ಮನವೊಲಿಸುವಲ್ಲಿ ಗ್ರಾಮಾಂತರ ಪೊಲೀಸರು ಸಲರಾದರು.
ಶಾಲೆಗೆ ಭೆೇಟಿ ನೀಡಿದ ಬಿಇಒ ನಾಗರಾಜ್ ಗ್ರಾಮಸ್ಥರ ದೂರನ್ನು ಆಲಿಸಿದರು. ಮುಖ ಶಿಕ್ಷಕಿಯ ಮೇಲೆ ಗ್ರಾಮಸ್ಥರು ಹಲವು ಆರೋಪಗಳನ್ನು ಮಾಡಿದರು. ಗ್ರಾಮಸ್ಥರ ಬಹುತೇಕ ಆರೋಪಗಳು ಸ್ಥಳದಲ್ಲೇ ಸಾಬೀತಾದವು. ವಿದ್ಯಾರ್ಥಿಗಳ ಶಿಷ್ಯವೇತನದ ದುರ್ಬಳಕೆ, ಶಾಲಾ ಬುಕ್ ಮಾರಾಟ ಸೇರಿದಂತೆ ಬಿಸಿಯೂಟ ದಿನಸಿಯಲ್ಲಿನ ವ್ಯತ್ಯಾಸಗಳು ದೃಢಪಟ್ಟವು. ಶಾಲಾ ರಜಾ ದಿನದಂದು ಶಾಲೆಯಲ್ಲಿ ಬಿಸಿಯೂಟ ತಯಾರಿಸಿರುವುದಾಗಿ ದಾಖಲೆ ಸೃಷ್ಟಿಸಿದ ಮುಖ್ಯಶಿಕ್ಷಕಿ ವೀರಮ್ಮ ಅವರನ್ನು ಅಧಿಕಾರಿಗಳ ಎದುರೇ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅನ್ಸರ್ ಆಲಿ ಬೇಗ್, ತಾಲೂಕು ಸಹಾಯಕ ನಿರ್ದೇಶಕ ದಾದಾಪೀರ್, ಸಂಪನ್ಮೂಲ ವ್ಯಕ್ತಿ ಹನುಮಂತಪ್ಪ, ಗ್ರಾಪಂ ಅಧ್ಯಕ್ಷ ಸುರೇಶ್, ಗ್ರಾಮಾಂತರ ಪಿಎಸ್‌ಐ ಶ್ರೀಶೈಲ ಇತರರಿದ್ದರು.