ಜಿಲ್ಲೆ

ಅಂಗನವಾಡಿ ಸಹಾಯಕಿಗೆ ಕಡ್ಡಾಯ ರಜೆ

ಕೋಲಾರ ಡೆಸ್ಕ್

ಭುವನಹಳ್ಳಿ ಕೇಂದ್ರದ ಮಕ್ಕಳ ಆಹಾರ ಹಸುಗಳಿಗೆ!


ಬೂದಿಕೋಟೆ: ಬಂಗಾರಪೇಟೆ ತಾಲೂಕು ಭುವನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಆಹಾರ ಪದಾರ್ಥಗಳನ್ನು ಹಸುಗಳಿಗೆ ಆಹಾರವಾಗಿ ನೀಡಿದ್ದ ಕೇಂದ್ರದ ಸಹಾಯಕಿಯನ್ನು ಸಿಡಿಪಿಒ ಮುನಿರಾಜು ಕಡ್ಡಾಯ ರಜೆಯ ಮೇಲೆ ತೆರಳಲು ಆದೇಶ ಹೊರಡಿಸಿದ್ದಾರೆ.
ಮಕ್ಕಳಿಗೆ ವಿತರಣೆ ಮಾಡಬೇಕಿದ್ದ ಆಹಾರ ಪದಾರ್ಥಗಳನ್ನು ಅಂಗನವಾಡಿ ಸಹಾಯಕಿ ಅವಧಿ ಮುಗಿದಿದೆ ಎಂದು 34 ಪ್ಯಾಕೆಟ್​ನಲ್ಲಿದ್ದ ಆಹಾರ ಪದಾರ್ಥವನ್ನು ಹಸುಗಳಿಗೆ ಹಾಕಿದ್ದರು. ಘಟನೆಗೆ ಸಂಬಂಧಿಸಿದಂತೆ ಸೆ.19ರಂದು ವಿಜಯವಾಣಿಯಲ್ಲಿ "ಮಕ್ಕಳಿಗೆ ನೀಡಬೇಕಿದ್ದ ಆಹಾರ ಪದಾರ್ಥ ಹಸುಗಳಿಗೆ!' ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಸಿಡಿಪಿಒ ಮುನಿರಾಜು ಇತರ ಅಧಿಕಾರಿಗಳೊಂದಿಗೆ ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪರಿಶೀಲನೆ ವೇಳೆ ಆಹಾರ ಪದಾರ್ಥಗಳ ಅವಧಿ ಮುಗಿದಿಲ್ಲ. ಬದಲಾಗಿ ಸಹಾಯಕಿ ಮತ್ತು ಕಾರ್ಯಕರ್ತೆಯ ರ್ನಿಲಕ್ಷ$್ಯದಿಂದ ಈ ರೀತಿಯಾಗಿದೆ ಎಂಬುದು ಬೆಳಕಿಗೆ ಬಂದಿದೆ.
ಸಿಡಿಪಿಒ ಮುನಿರಾಜು ಮಾತನಾಡಿ, ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಮಾಡಲಾಗಿದ್ದ ಆಹಾರ ಪದಾರ್ಥಗಳ ಅವಧಿ ಮುಗಿದಿದೆ ಎಂದು ಸಹಾಯಕಿ ಗ್ರಾಮದ ಮಹಿಳೆಯೊಬ್ಬರಿಗೆ ಬಿಸಾಡಲು ಸೂಚಿಸಿದ್ದಾರೆ. ಆದರೆ ಅದನ್ನು ಬಿಸಾಡದೇ ಹಸುಗಳಿಗೆ ಹಾಕಲು ಮುಂದಾದಾಗ ಗ್ರಾಮಸ್ಥರಿಗೆ ವಿಚಾರ ಗೊತ್ತಾಗಿದೆ. ಅಸಲಿಗೆ ಆಹಾರ ಪದಾರ್ಥಗಳ ಅವಧಿ ಇನ್ನೂ ಮೂರು ತಿಂಗಳಿದ್ದು, ಅದನ್ನು ಗಮನಿಸದೇ ಸಹಾಯಕಿ ಬಿಸಾಡಲು ಮುಂದಾಗಿದ್ದಾರೆ. ಅವಧಿ ಮುಗಿದಿದ್ದರೆ ಇಲಾಖೆಯ ಗಮನಕ್ಕೆ ತರಬೇಕಿತ್ತು.
ಅದು ಬಿಟ್ಟು ಏಕ ಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದು ಸಮಂಜಸವಲ್ಲ. ಸಹಾಯಕಿಯ ರ್ನಿಲಕ್ಷ$್ಯದಿಂದ ಘಟನೆ ನಡೆದಿದ್ದು, ಮುಂದೆ ಎಲ್ಲಿಯೂ ಇಂತಹ ಅಚಾತುರ್ಯ ನಡೆಯಬಾರದು ಎಂಬ ಉದ್ದೇಶದಿಂದ ಸಹಾಯಕಿಯನ್ನು 10 ದಿನಗಳ ಕಾಲ ಕಡ್ಡಾಯ ರಜೆ ಮೇಲೆ ತೆರಳಲು ಸೂಚಿಸಲಾಗಿದೆ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡಿದ್ದು, ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.