ಜಿಲ್ಲೆ

ಹಾಲಿಗೆ ಲಾಭದಾಯಕ ಬೆಲೆ ಘೋಷಿಸಲು ಒತ್ತಾಯ

ಮೈಸೂರು: ರೈತರು ಉತ್ಪಾದಿಸುವ ಹಾಲಿಗೆ ಲಾಭದಾಯಕ ಬೆಲೆ ಘೋಷಿಸಬೇಕು, ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.


ರೈತ ಬೆಳೆದ ಕೃಷಿ ಉತ್ಪನ್ನಗಳಿಗೆ ಸರಿಯಾದ ಲಾಭದಾಯಕ ಬೆಲೆ ಸಿಗದೆ ಯುವಕರು ಕೃಷಿಯಿಂದ ಬೇಸತ್ತು ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಹೀಗೆ ಮುಂದುವರಿದರೆ ಕೃಷಿಕರು ಇಲ್ಲದೆ ಆಹಾರ ಉತ್ಪಾದನೆ ಸ್ಥಗಿತಗೊಂಡು ಆಹಾರ ಸಮಸ್ಯೆಯಿಂದ ಬಳಲುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಹೈನುಗಾರಿಕೆ ವ್ಯವಸಾಯದ ಒಂದು ಭಾಗವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆಯಿಂದ ಬಡ, ಮಧ್ಯಮ ವರ್ಗದ ರೈತ ಕುಟುಂಬಗಳು ಜೀವನ ರೂಪಿಸಿಕೊಂಡಿವೆ. ಆದರೆ, ಅವರು ಉತ್ಪಾದಿಸುವ ಹಾಲಿಗೆ ಖರ್ಚಿಗಿಂತ ಕಡಿಮೆ ಬೆಲೆ ಸಿಗುತ್ತಿದೆ. ಹಾಲು ಒಕ್ಕೂಟಗಳು ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸುತ್ತಿವೆ ಎಂದು ಕಿಡಿಕಾರಿದರು.


ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳಿಂದ ಬೆಳೆ ಸಾಲ ಪಡೆದಿದ್ದ ರೈತರ ಗರಿಷ್ಠ 2 ಲಕ್ಷ ರೂ.ಗಳವರೆಗೆ ಸಾಲ ಮನ್ನಾ ಮಾಡಲಾಯಿತು. ವಿವಿಧ ಹಂತಗಳಲ್ಲಿ ಬಿಡುಗಡೆಯಾದ ಸಾಲ ಮನ್ನಾ ಹಣ ಆಮೆ ವೇಗದಲ್ಲಿ ರೈತರಿಗೆ ತಲುಪಿದೆ. ಸತತ ಮಳೆಯ ಕಾರಣದಿಂದ ಬೆಳೆಗಳು ನಷ್ಟವಾಗಿವೆ. ಆದರೂ ಸರ್ಕಾರದಿಂದ ಯಾವುದೇ ಪರಿಹಾರ ಬಂದಿಲ್ಲ. ರೈತರ ಹಿತದೃಷ್ಟಿಯಿಂದ ಬೆಳೆ ಸಾಲ ಮನ್ನಾ ಯೋಜನೆ ಘೋಷಣೆಯಾಗಿ 4 ವರ್ಷ ಕಳೆದರೂ ಸುಮಾರು 40 ಸಾವಿರಕ್ಕಿಂತ ಹೆಚ್ಚು ರೈತರಿಗೆ ಇನ್ನೂ ಸಾಲ ಮನ್ನಾ ಹಣ ಬಿಡುಗಡೆಯಾಗಿಲ್ಲ. ಸಹಕಾರಿ ಸಂಘಗಳು ರೈತರೆಲ್ಲರ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಿ ಹಲವಾರು ತಿಂಗಳುಗಳೇ ಕಳೆದಿವೆ. ಆದರೂ ಸಾಲ ಮನ್ನಾ ವಂಚಿತರು ನಿರೀಕ್ಷೆಯಲ್ಲಿ ಕಾಲಕಳೆಯುವಂತಾಗಿದೆ. ಕೂಡಲೇ ಸರ್ಕಾರ ಸಾಲ ಮನ್ನಾ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.


ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಗಂಡತೋರು, ಚನ್ನಪ್ಪ, ಗಿರೀಶ್, ಪ್ರಭುಸ್ವಾಮಿ, ನಾಗವೇಣಿ, ಕುಮಾರ್ ನಾಯಕ, ಮಂಜುನಾಥ್, ಭೈರನಾಯಕ ಕೋಟೆ, ಗಣೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.