ಜಿಲ್ಲೆ

ಕೊಡವರನ್ನು ಎಸ್ಟಿ ಪಟ್ಟಿಗೆ ಸೇರಿಸಲು ಒತ್ತಾಯ

reportermys

ಮಡಿಕೇರಿ: ಕೇಂದ್ರ ಸರ್ಕಾರದ ಅಧೀನದ ಕೇಂದ್ರ ಬುಡಕಟ್ಟು ಸಚಿವಾಲಯವು ೨೦೧೭ರಲ್ಲಿ ರೂಪಿಸಿದ ಹೊಸ ಮರು ವ್ಯಾಖ್ಯಾನಿಸಿದ ಮಾನದಂಡ ದಡಿಯಲ್ಲಿ ಕೊಡವ ಜನಾಂಗವನ್ನು ಎಸ್ಟಿ ಪಟ್ಟಿಗೆ ಸೇರಿಸುವ ಮೂಲಕ ಸಂವಿಧಾನದ ಭದ್ರತೆಯನ್ನು ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗಿನ ಮೂಲ ಬುಡಕಟ್ಟು ಜನಾಂಗವಾಗಿರುವ ಕೊಡವರನ್ನು ಎಸ್ಟಿ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದು ತ್ವರಿತವಾಗಿ ಆಗದಿದ್ದರೆ ಕೊಡವ ಬುಡಕಟ್ಟು ಜನಾಂಗದ ಭವಿಷ್ಯವು ಕತ್ತಲೆಯಲ್ಲಿ ಮುಳುಗುತ್ತದೆ. ಕೊಡವರ ಜಾನಪದ ಗುರುತು ಮತ್ತು ಭೌಗೋಳಿಕ-ರಾಜಕೀಯ ಅಸ್ತಿತ್ವಕ್ಕೆ ಹಾನಿಯಾಗಲಿದೆ. ಇತರ ಜನಾಂಗೀಯ ಗುಂಪುಗಳಿಗೆ ನೀಡಲಾಗುವ ಅದೇ ಸಾಂವಿಧಾನಿಕ ಪೋಷಣೆಯನ್ನು ಕೊಡವ ಬುಡಕಟ್ಟು ಜನಾಂಗಕ್ಕೂ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.


ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಪಹಾರಿ ಸಮುದಾಯ, ಪೆರಂಬಲೂರಿನ ನರಿಕೊರವನ್/ನರಿಕುರವರ್, ಊಟಿಯ ಬಡಗಾಸ್, ಅಸ್ಸಾಂನ ಕೋಚ್ ರಾಜ್ಬೊಂಗ್ಶಿ, ಮಟಕ್, ಮೋರಾನ್, ಟೀ ಟ್ರೈಬ್, ಚುಟಿಯಾ, ತೈ ಅಹೋಮ್ ಸೇರಿದಂತೆ ೬ ಬುಡಕಟ್ಟು ಸಮುದಾಯಗಳನ್ನು ಎಸ್ಟಿ ಪಟ್ಟಿಗೆ ಸೇರಿಸಲು ಉತ್ಸುಕವಾಗಿದೆ ಮತ್ತು ಪ್ರಕ್ರಿಯೆ ಆರಂಭಿಸಿದೆೆ. ಸಾಂವಿಧಾನಿಕವಾಗಿ ಹಕ್ಕನ್ನು ಪಡೆಯಲು ಬಾಕಿ ಉಳಿದಿರುವ ಕೊಡವ ಜನಾಂಗದ ಬಗ್ಗೆಯೂ ಕೇಂದ್ರ ಸರ್ಕಾರ ಅದೇ ಕ್ರಮ ಅನುಸರಿಸಬೇಕು ಎಂದು ಆಗ್ರಹಿಸಿದ್ದಾರೆ.


೧೯೫೬ ರಲ್ಲಿ ಕೂರ್ಗ್ ಅನ್ನು ವಿಶಾಲ ಮೈಸೂರಿನಲ್ಲಿ ವಿಲೀನಗೊಳಿಸಿದ ನಂತರ, ಇಂದಿನ ಕರ್ನಾಟಕ ರಾಜ್ಯವು ಕೊಡವ ಜನಾಂಗದ ಎಲ್ಲಾ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಹುಸಿ ಮಾಡಿತು. ಕೊಡವ ಜನಾಂಗದೊಳಗೆ ಯಾವುದೇ ಉಪಪಂಗಡವಿಲ್ಲ. ನಾವು ಕೂರ್ಗ್‌ಗೆ ಮಾತ್ರ ಸೀಮಿತವಾಗಿದ್ದೇವೆ. ನಮ್ಮ ಜನಸಂಖ್ಯೆ ಕೂಡ ಕಡಿಮೆ ಇದೆ. ಆದ್ದರಿಂದ ಸೂಕ್ಷ್ಮ ಕೊಡವ ಜನಾಂಗವನ್ನು ರಕ್ಷಿಸಲು ಮತ್ತು ಅಧಿಕಾರ ನೀಡಲು ಸಂವಿಧಾನದಲ್ಲಿ ಉಳಿದಿರುವ ಏಕೈಕ ಆಯ್ಕೆಯೆಂದರೆ ಅವರನ್ನು ಎಸ್‌ಟಿ ಪಟ್ಟಿಗೆ ಸೇರಿಸುವುದು ಎಂದು ನಾಚಪ್ಪ ಅಭಿಪ್ರಾಯಪಟ್ಟಿದ್ದಾರೆ.


೧೭ ಆಗಸ್ಟ್ ೨೦೨೨ ರಂದು ಕರ್ನಾಟಕ ಸರ್ಕಾರದ ಬುಡಕಟ್ಟು ಕಲ್ಯಾಣ ಸಚಿವರನ್ನು ಭೇಟಿ ಮಾಡಿದ ಸಂದರ್ಭ ನಮ್ಮ ಬೇಡಿಕೆಗೆ ಒಪ್ಪಿಗೆ ನೀಡಿ, ಕಡತವನ್ನು ಕರ್ನಾಟಕದ ಸಿಎಂಗೆ ರವಾನಿಸಿದರು. ಆದರೆ ನಂತರದ ದಿನಗಳಲ್ಲಿ ನಮ್ಮ ಕಡತವನ್ನು ನಿರ್ಲಕ್ಷಿಸಲಾಗಿದೆ. ಇದು ನ್ಯಾಯಾಂಗ ನಿಂದನೆಗೆ ಸಮಾನವಾಗಿದೆ ಎಂದು ನಾಚಪ್ಪ ಟೀಕಿಸಿದರು.


ಕೇಂದ್ರ ಬುಡಕಟ್ಟು ಮಂತ್ರಾಲಯ, ರಾಷ್ಟ್ರೀಯ ಬುಡಕಟ್ಟು ಆಯೋಗ, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಪ್ರಧಾನ ಕಾರ್ಯದರ್ಶಿ, ಬುಡಕಟ್ಟು ಕಲ್ಯಾಣ ಮಂತ್ರಾಲಯದ ಕಾರ್ಯದರ್ಶಿ, ನಿರ್ದೇಶಕರು ಹಾಗೂ ಬುಡಕಟ್ಟು ಶಂಶೋಧನ ನಿರ್ದೇಶನಾಲಯದ ನಿರ್ದೇಶಕರಿಗೆ ಈ ಸಂಬಂಧ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.