-ಸಮಗ್ರ ಪ್ರಶಸ್ತಿ ಪಡೆದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು 
ಜಿಲ್ಲೆ

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯಕ್ಕೆ ಸಮಗ್ರ ಪ್ರಶಸ್ತಿ

ಗೋಣಿಕೊಪ್ಪ: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ 9ನೇ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ ಕಾರ್ಯಕ್ರಮಕ್ಕೆ ಶನಿವಾರ ವರ್ಣರಂಜಿತ ತೆರೆ ಬಿದ್ದಿತು.


ಮೂರು ದಿನಗಳಿಂದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಯುವಜನೋತ್ಸವ ಸಂಭ್ರಮ ಮನೆ ಮಾಡಿತ್ತು. 5 ವರ್ಷಗಳಿಗೊಮ್ಮೆ ನಡೆಯುವ ಈ ವಿನೂತನ ಕಾರ್ಯಕ್ರಮದಲ್ಲಿ ರಾಜ್ಯದ 6 ಮಹಾವಿದ್ಯಾಲಯಗಳ ಐನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಸಂಸ್ಕೃತಿ ಬಿಂಬಿಸುವ ಉಡುಪುಗಳನ್ನು ಧರಿಸಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು.


ಪೊನ್ನಂಪೇಟೆ ಚಾಂಪಿಯನ್:
ಭಾಗವಹಿಸಿದ್ದ 6 ಮಹಾವಿದ್ಯಾಲಯಗಳಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯವು 2024ರ ಯುವ ಜನೋತ್ಸವದ ಯುವ ಝೇಂಕಾರದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆಯುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು. ಮೂಡಿಗೆರೆಯ ತೋಟಗಾರಿಕಾ ಮಹಾವಿದ್ಯಾಲಯ ತಂಡವು ದ್ವಿತಿಯ ಸ್ಥಾನ ಪಡೆಯಿತು. ವಿಜೇತ ತಂಡಗಳಿಗೆ ಆಕರ್ಷಕ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರಗಳನ್ನು ಗಣ್ಯರು ವಿತರಿಸಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಸಹಯೋಗದಲ್ಲಿ 3 ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ನಡೆದವು.


6 ಮಹಾವಿದ್ಯಾಲಯಗಳು:
ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯ, ಕೃಷಿ ಕಾಲೇಜು ನವಿಲೆ ಶಿವಮೊಗ್ಗ, ತೋಟಗಾರಿಕೆ ಮಹಾವಿದ್ಯಾಲಯ ಮೂಡಿಗೆರೆ, ಕೃಷಿ ಕಾಲೇಜು ಇರುವಕ್ಕಿ, ಸ್ನಾತಕೋತ್ತರ ಮಹಾವಿದ್ಯಾಲಯ ಶಿವಮೊಗ್ಗ ಹಾಗೂ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮುಖ್ಯಮಂತ್ರಿಗಳ ಗೌರವ ವೈದ್ಯಕೀಯ ಸಲಹೆಗಾರ, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಡಾ.ಎಚ್.ರವಿಕುಮಾರ್ ಮಾತನಾಡಿ, ದೇಶದ ಭವಿಷ್ಯ ಯುವ ಜನರ ಮೇಲಿದೆ. ಅಲ್ಲದೇ, ಕರ್ತವ್ಯ, ಜವಾಬ್ದಾರಿಯೂ ಇದೆ. ಜಾಗತಿಕ ತಾಪಮಾನ ಅತಿವೇಗವಾಗಿ ಸಾಗುತ್ತಿದೆ. ಅರಣ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿಯೂ ಯುವ ಸಮುದಾಯದ್ದಾಗಿದೆ. ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಮಹಾವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಬೇಕಾದ ಉತ್ತಮ ಅವಕಾಶಗಳು, ವೇದಿಕೆಗಳನ್ನು ನೀಡುತ್ತಿದೆ. ಎಲ್ಲ ವಿದ್ಯಾರ್ಥಿಗಳಿಗೂ ತಮ್ಮ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸುತ್ತಿದೆ. ತಮ್ಮ ಲಭಿಸುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.


ಈ ಹಿಂದೆ ಶಾಲಾ-ಕಾಲೇಜು ನಾಯಕನಾಗಿ ಬೆಳೆದ ವ್ಯಕ್ತಿಗಳು ಇಂದು ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಕಾಲೇಜಿನಲ್ಲಿ ನಾಯಕತ್ವ ಗುಣಗಳು ಬೆಳೆಯುತ್ತವೆ. ಇತ್ತೀಚೆಗೆ ರಾಜಕೀಯ ಕ್ಷೇತ್ರಕ್ಕೆ ಸಾಕಷ್ಟು ಗಣ್ಯರ ಪದಾರ್ಪಣೆಯಾಗುತ್ತಿದೆ. ರಾಜಕೀಯ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆ ಅವಕಾಶ ಲಭಿಸಲಿದೆ ಎಂದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ಕುಲಪತಿ ಡಾ.ಆರ್.ಸಿ.ಜಗದೀಶ್, ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ಎಲ್ಲ ರೀತಿಯ ಸವಲತ್ತುಗಳನ್ನು ಮಹಾವಿದ್ಯಾಲಯಗಳು ನೀಡುತ್ತಿವೆ. ಮೊಬೈಲ್‌ನಿಂದ ವಿದ್ಯಾರ್ಥಿಗಳು ದೂರವಿರಬೇಕು. ಟಿವಿಯಲ್ಲಿ ಕ್ರಿಕೆಟ್ ನೋಡುವ ಬದಲು ಮೈದಾನದಲ್ಲಿ ಆಟ ಆಡಬೇಕು. ಇದರಿಂದ ಆರೋಗ್ಯ ವೃದ್ಧಿಸಲಿದೆ ಎಂದರು.
ಕೊಡಗಿನ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯ ಉತ್ತಮ ರೀತಿಯಲ್ಲಿ ಯುವಜನೋತ್ಸವ ಆಚರಿಸುವ ಮೂಲಕ ಉಳಿದ ಮಹಾವಿದ್ಯಾಲಯಗಳಿಗೆ ಮಾದರಿಯಾಗಿದೆ. ಮಹಾವಿದ್ಯಾಲಯಕ್ಕೆ ಇನ್ನಷ್ಟು ಮೂಲಸೌಕರ್ಯ ಒದಗಿಸಲಾಗುವುದು ಎಂದು ತಿಳಿಸಿದರು.


ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ.ದೇವಗಿರಿ ಮಾತನಾಡಿ, 3 ದಿನಗಳ ಕಾರ್ಯಕ್ರಮಗಳ ಯಶಸ್ವಿಗೆ ಉಪನ್ಯಾಸಕರು, ವಿದ್ಯಾರ್ಥಿಗಳು ಶ್ರಮ ವಹಿಸಿದ್ದಾರೆ. ವಿವಿಧ ಮಹಾವಿದ್ಯಾಲಯಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಪರಸ್ಪರ ಬೆರೆಯುವಂತಹ ವೇದಿಕೆ ನಿರ್ಮಾಣ ಮಾಡಿಕೊಡಲಾಗಿದೆ. ಸೋಲು ಗೆಲುವಿನ ಮೆಟ್ಟಿಲು ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಇದರಿಂದ ಮುಂದಿನ ಗೆಲುವು ತಮ್ಮದಾಗಲಿದೆ ಎಂದರು.

ವಿವಿಧ ಅರಣ್ಯ ಮಹಾವಿದ್ಯಾಲಯಗಳ ಮುಖ್ಯಸ್ಥರಾದ ಡಾ.ಕೆಂಚರೆಡ್ಡಿ, ಡಾ.ಗಣೇಶ್ ಪ್ರಸಾದ್ ಡಾ.ಕೆ.ಎ.ಈಶ್ವರ್ ಇತರರು ಇದ್ದರು.