ವಿರಾಜಪೇಟೆ : ಇಂದಿನ ವಿದ್ಯಾರ್ಥಿಗಳು ಮೊಬೈಲ್ ಲೋಕದಲ್ಲಿ ಕಳೆದು ಹೋಗುವ ಮೂಲಕ ಕಲೆ ಸೇರಿದಂತೆ ದೈಹಿಕ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ ಎಂದು ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರೆ. ಫಾ. ಮದಲೈ ಮುತ್ತು ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಸಾಂಸ್ಕೃತಿಕ ಮೇಳದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂಬರುವ ಎಸ್‌ಎಸ್‌ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರುವ ವಿದ್ಯಾರ್ಥಿಗಳ ಪದವಿ ಪೂರ್ವ ಕಾಲೇಜು ಶಿಕ್ಷಣಕ್ಕೆ ಸಂಸ್ಥೆಯ ವತಿಯಿಂದ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಮುಖ್ಯಶಿಕ್ಷಕ ಬೆನ್ನಿ ಜೋಸೆಫ್ ಮಾತನಾಡಿ, ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.95 ರಷ್ಟು ಅಂಕ ಪಡೆಯುವ ಯಾವುದೇ ವಿದ್ಯಾಸಂಸ್ಥೆಯ ವಿದ್ಯಾರ್ಥಿಗೆ ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಶಿಕ್ಷಣವನ್ನು ನೀಡಲಾಗುವುದು ಎಂದು ಘೋಷಿಸಿದರು.
ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿದರು. ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಪ್ರಕಾಶ್, ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕ ಡಾ.ಹೇಮಂತ್, ಪ್ರಾಥಮಿಕ ಶಾಲಾ ವಿಭಾಗಗಳ ಮುಖ್ಯಶಿಕ್ಷಕರು ಉಪಸ್ಥಿತರಿದ್ದರು.
ವಿರಾಜಪೇಟೆಯ ಕಾವೇರಿ ಶಾಲೆ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಮೇಳದಲ್ಲಿ ಆಯೋಜಿಸಿದ್ದ ವಿವಿಧ 7 ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ತೋರಿ ಸಮಗ್ರ ಪ್ರಶಸ್ತಿ ಪಡೆದ ಕಾವೇರಿ ಶಾಲೆಯ ತಂಡ ಆಕರ್ಷಕ ಟ್ರೋಫಿ ಹಾಗೂ 25,555 ರೂ. ನಗದು ಬಹುಮಾನವನ್ನು ಪಡೆದುಕೊಂಡಿತು.
ಮಿಶ್ರ ಕ್ರಿಕೆಟ್‌ನಲ್ಲಿ ಲುಡ್ಸ್ ಶಾಲೆ ಪ್ರಥಮ ಹಾಗೂ ಸಂತ ಅನ್ನಮ್ಮ ಅನುದಾನಿತ ಶಾಲೆ ದ್ವಿತೀಯ ಬಹುಮಾನ ಪಡೆದುಕೊಂಡಿತು. ಟ್ರಷರ್ ಹಂಟ್ ಸ್ಪರ್ಧೆಯಲ್ಲಿ ಕೂರ್ಗ್ ವ್ಯಾಲಿ ಶಾಲೆಯು (ಪ್ರ)ಬಹುಮಾನ ಪಡೆದುಕೊಂಡರೆ, ಮರ್ಕಝ್ ಶಾಲೆಯು (ದ್ವಿ), ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಕಾವೇರಿ ಶಾಲೆ (ಪ್ರ), ಮರ್ಕಝ್ ಶಾಲೆ (ದ್ವಿ), ಆಹಾರ ಮೇಳದಲ್ಲಿ ಕಾವೇರಿ ಶಾಲೆ (ಪ್ರ), ಸಂತ ಅನ್ನಮ್ಮ ಅನುದಾನಿತ ಶಾಲೆ (ದ್ವಿ), ನೃತ್ಯಸ್ಪರ್ಧೆಯಲ್ಲಿ ಕಾವೇರಿ ಶಾಲೆ (ಪ್ರ), ಎಸ್‌ಎಂಎಸ್ ಶಾಲೆ (ದ್ವಿ), ಲಗೋರಿ ಸ್ಪರ್ಧೆಯಲ್ಲಿ ಎಸ್‌ಎಂಎಸ್ ಶಾಲೆ (ಪ್ರ), ಲುಡ್ಸ್ ಶಾಲೆ (ದ್ವಿ), ರಸ ಪ್ರಶ್ನೆ ಸ್ಪರ್ಧೆಯಲ್ಲಿ ಕಾವೇರಿ ಶಾಲೆ (ಪ್ರ), ಜ್ಞಾನಜ್ಯೋತಿ ಶಾಲೆ (ದ್ವಿ) ಬಹುಮಾನ ಪಡೆದುಕೊಂಡಿತು.
ಸಾಂಸ್ಕೃತಿಕ ಮೇಳದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಸುಮಾರು 17ಕ್ಕು ಹೆಚ್ಚು ಶಾಲೆಗಳ ತಂಡಗಳು ಭಾಗವಹಿಸಿದ್ದವು. ಇದೇ ಮೊದಲ ಬಾರಿಗೆ ಪ್ರತಿ ಸ್ಪರ್ಧೆಗಳಲ್ಲಿ ಒಬ್ಬೊಬ್ಬ ಶಿಕ್ಷಕರು ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು. ಶಿಕ್ಷಕರು ತಮ್ಮ ವಿದ್ಯಾರ್ಥಿಗಳೊಂದಿಗೆ ನೃತ್ಯ, ಕ್ರಿಕೆಟ್, ಲಗೋರಿ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಆನಂದಿಸಿದರು.