ಕಂಪ್ಲಿ ಸಿಎಚ್‌ಸಿಗೆ ಲಕ್ಷ್ಯರಾಷ್ಟ್ರಮಟ್ಟದ ಪ್ರಶಸ್ತಿ ದೊರೆತ ಹಿನ್ನಲೆಯಲ್ಲಿ ಆರೋಗ್ಯ ಸಿಬ್ಬಂದಿ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದರು. ವೈದ್ಯರಾದ ರವೀಂದ್ರ ಕನಕೇರಿ, ಡಾ.ವೀರೇಶ್, ಡಾ.ರವಿರಾಜ, ಡಾ.ಶ್ರೀನಿವಾಸರಾವ್, ಕೆ.ಟಿ.ಶಶಿಕಲಾ ಇದ್ದರು. 
ಜಿಲ್ಲೆ

ಕಂಪ್ಲಿ ಸಿಎಚ್‌ಸಿಗೆ ಲಕ್ಷ್ಯ ರಾಷ್ಟ್ರೀಯ ಪ್ರಶಸ್ತಿ ಗರಿ

Kopala - Desk - Eraveni

ಕಂಪ್ಲಿ: ಸಮುದಾಯ ಆರೋಗ್ಯ ಕೇಂದ್ರವು ಲೇಬರ್ ರೂಮ್ ಶೇ.77ರಷ್ಟು ಹಾಗೂ ಮೆಟರ್ನಿಟಿ ಓಟಿ ಶೇ.84ರಷ್ಟು ಗುಣಮಟ್ಟ ಸಾಧಿಸಿ ಲಕ್ಷ್ಯ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡು ಜಿಲ್ಲೆಗೆ ಹೆಗ್ಗಳಿಕೆ ತಂದಿದೆ ಎಂದು ಸಿಎಚ್‌ಸಿ ವೈದ್ಯಾಧಿಕಾರಿ ರವೀಂದ್ರ ಕನಕೇರಿ ಹೇಳಿದರು.

ಇಲ್ಲಿನ ಸಮುದಾಯ ಆಸ್ಪತ್ರೆ ಲಕ್ಷ್ಯ(ಲೇಬರ್ ರೂಮ್ ಗುಣಮಟ್ಟ ಸುಧಾರಣೆ ಯೋಜನೆ) ರಾಷ್ಟ್ರೀಯ ಪ್ರಶಸ್ತಿ ಪಡೆದ ಹಿನ್ನಲೆಯಲ್ಲಿ ಸೋಮವಾರ ಸಿಎಚ್‌ಸಿ ಸಿಬ್ಬಂದಿಗಳಿಗೆ ಸಿಹಿಹಂಚಿ ಮಾತನಾಡಿದರು.

2022-23ನೇ ಸಾಲಿನಲ್ಲಿ 890ಹೆರಿಗೆಗಳಾಗಿದ್ದು, ಇದರಲ್ಲಿ 770 ನಾರ್ಮಲ್ ಹೆರಿಗೆಗಳಾಗಿವೆ. 295ಟ್ಯುಬೆಕ್ಟಮಿ, 115ಲ್ಯಾಪ್ರೊಸ್ಕೋಪಿಕ್ ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆಗಳನ್ನು ನಡೆಸಿದೆ. ಸ್ವಚ್ಚತೆ, ಹೆರಿಗೆ ಪ್ರಮಾಣ, ಶಸ್ತ್ರ ಚಿಕಿತ್ಸೆ ಪ್ರಮಾಣ, ಹೊರರೋಗಿಗಳ ಸಂಖ್ಯೆ, ಲೇಬರ್ ರೂಮ್,

ಮೆಟರ್ನಿಟಿ ಓಟಿಗಳ ಗುಣಮಟ್ಟ, ಸ್ವಚ್ಚತೆಯ ಪ್ರತಿ ತಿಂಗಳ ವರದಿಯನ್ನು ಆಧರಿಸಿ ಜಿಲ್ಲಾ ಸಮೀಕ್ಷಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಲಕ್ಷ್ಯ ಮೌಲ್ಯಮಾಪನ ತಂಡ ಆಗಮಿಸಿ ಪರಿಶೀಲಿಸಿದ ನಂತರ ಪ್ರಮಾಣ ಪತ್ರ ದೊರೆತಿದೆ.

ಸಿಎಚ್‌ಸಿ ಎಲ್ಲ ವೈದ್ಯರು, ಸಿಬ್ಬಂದಿ ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಮಾಣಪತ್ರದೊಂದಿಗೆ 3ವರ್ಷದವರೆಗೂ ವಿಶೇಷ ಅನುದಾನ ದೊರಕಲಿದೆ. ಇದರಲ್ಲಿ ಶೇ.25ರಷ್ಟು ಸಿಬ್ಬಂದಿಗೆ ಪ್ರೋತ್ಸಾಹಧನವನ್ನಾಗಿ ವಿತರಿಸಲು ಮೀಸಲಿರುತ್ತದೆ. ಮಾರ್ಗಸೂಚಿ ಅನ್ವಯ ಅನುದಾನ ಬಳಕೆಗೊಳ್ಳಲಿದೆ ಎಂದರು.

ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶಬಾಬು ಮಾತನಾಡಿ, ಹೆರಿಗೆ ಕೊಠಡಿ ಹೈಜೆನಿಕ್‌ಆಗಿದ್ದು, ಉತ್ತಮ ಗುಣಮಟ್ಟದಿಂದ ಕೂಡಿದೆ. ಲಕ್ಷ್ಯ ಪ್ರಮಾಣಪತ್ರದಿಂದ ಇಬ್ಬರು ಸ್ಟ್ಯಾಫ್‌ನರ್ಸ್ ಸೌಲಭ್ಯದೊಂದಿಗೆ ವಿಶೇಷ ಅನುದಾನ ದೊರಕಲಿದೆ.

ನವಜಾತ ಶಿಶುಗಳ ಆರೈಕೆಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುವುದು. ಇದೇ ಗುಣಮಟ್ಟವನ್ನು ಮುಂದುವರೆಸಿಕೊಂಡು ಹೋದಲ್ಲಿ ಗುಣಮಟ್ಟದ ಚಿಕಿತ್ಸೆ, ಜನಸ್ನೇಹಿ ವಾತಾವರಣ, ಸ್ವಚ್ಚತೆ ಮಾನದಂಡಗಳಿಗೆ ಕಾಯಕಲ್ಪ ಪ್ರಶಸ್ತಿಗೂ ಅರ್ಹತೆ ದೊರಕಲಿದೆ ಎಂದರು.

ಆಸ್ಪತ್ರೆಯ ವೈದ್ಯರಾದ ವೀರೇಶ್, ಡಾ.ರವಿರಾಜ, ಡಾ.ಶ್ರೀನಿವಾಸರಾವ್, ಕಚೇರಿ ಅಧೀಕ್ಷಕಿ ಕೆ.ಟಿ.ಶಶಿಕಲಾ, ನೇತ್ರಾಧಿಕಾರಿ ಪ್ರಕಾಶಗೌಡ, ಬಿಎಚ್‌ಇಒ ಕೆ.ಶೋಭಾ ಇದ್ದರು.