ಜಿಲ್ಲೆ

ನಿಗದಿತ ಅವಧಿಯೊಳಗೆ ಕಾಮಗಾರಿ ಮುಕ್ತಾಯ: ಅಧಿಕಾರಿಗಳಿಗೆ ಮಂಜುನಾಥ್ ಸೂಚನೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನೆ ಸಭೆ ಬಿ.ಸಿ.ರೋಡಿನ ಎಸ್.ಜಿ.ಎಸ್.ಆರ್.ವೈ. ಸಭಾಂಗಣದಲ್ಲಿ ತಾ.ಪಂ.ಆಡಳಿತಾಧಿಕಾರಿ ಮಂಜುನಾಥ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.

ಎಲ್ಲ ಇಲಾಖೆಗಳ ಮಾಸಿಕ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡ ಆಡಳಿತ ಅಧಿಕಾರಿ ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳ ವಿವರ ಮತ್ತು ಮುಂದೆ ಆಗಬೇಕಾಗಿರುವ ಕಾಮಗಾರಿಯ ಪೂರ್ಣ ಮಾಹಿತಿ ಪಡೆದುಕೊಂಡರು. ತಾಂತ್ರಿಕ ಲೋಪದೋಷಗಳಿಂದ ಆಗಿರುವ ತೊಂದರೆ ಮತ್ತು ಅಧಿಕಾರಿಗಳ ಕಾರ್ಯವೈಖರಿಯಲ್ಲಿ ನ್ಯೂನ್ಯತೆಗಳ ಬಗ್ಗೆಯೂ ಅವರು ಪ್ರಸ್ತಾಪ ಮಾಡಿದರು. ಎಲ್ಲ ಯೋಜನೆಗಳ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಮಾಡಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆಯಾಯ ಇಲಾಖೆ ನೀಡಿದ ಗುರಿ ಸಾಧಿಸಲು ಪ್ರಯತ್ನಿಸಬೇಕು, ಅನುದಾನಗಳು ಸಂಪೂರ್ಣ ಸದ್ಬಳಕೆಯಾಗಬೇಕು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

36 ಶಾಲಾ ಕಟ್ಟಡಗಳು ಮಳೆಗೆ ಹಾನಿಯಾಗಿದ್ದು, ಎಷ್ಟು ಕಟ್ಟಡಗಳು ದುರಸ್ತಿಯಾಗಿವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು. 34 ಶಾಲೆಗಳ ದುರಸ್ತಿ ಕಾರ್ಯ ನಡೆಸುವುದಕ್ಕೆ ಸಮಸ್ಯೆ ಇಲ್ಲ ಉಳಿದಂತೆ ಎರಡು ಶಾಲೆ ಹಾಗೂ ಹೆಚ್ಚುವರಿಯಾಗಿ ಎರಡು ಸೇರಿ ಒಟ್ಟು ನಾಲ್ಕು ಶಾಲೆಗಳ ದುರಸ್ತಿಗಾಗಿ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಲಾಗಿದೆ ಅನುದಾನ ಮಂಜೂರಾದ ಕೂಡಲೇ ಕಾಮಗಾರಿ ಆರಂಭಿಸುವುದಾಗಿ ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ ಮಾಹಿತಿ ನೀಡಿದರು. ಬೆಳೆ ಸಮೀಕ್ಷೆಯಲ್ಲಿ ಬಂಟ್ವಾಳ ತಾಲೂಕು ಉತ್ತಮ ಸಾಧನೆ ಮಾಡಿದೆ ಎಂದು ಸಭೆಯಲ್ಲಿ ಕೃಷಿ ಅಧಿಕಾರಿ ತಿಳಿಸಿದರು. ಮೇ ತಿಂಗಳಿನಿಂದ ಈವರೆಗೆ ಉತ್ತಮ ಮಳೆಯಾಗಿದ್ದು, ಕಳೆದ ತಿಂಗಳು 15 ಪರ್ಸೆಂಟ್ ಹೆಚ್ಚುವರಿ ಮಳೆಯಾಗಿದೆ ಎಂದು ಮಾಹಿತಿ ನೀಡಿದರು. ತಾಲೂಕು ವ್ಯಾಪ್ತಿಯಲ್ಲಿ ಡೆಂಘೆ ಹಾವಳಿ ಇಲ್ಲ ಎಂದು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ತಿಳಿಸಿದರು. ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಉಪಸ್ಥಿತರಿದ್ದರು.