ಬಂಟ್ವಾಳ: ಗ್ರಾಮಸ್ಥರ ಆಕ್ರೋಶಕ್ಕೆ ಮಣಿದು ಸೋಮವಾರ ಪೊಳಲಿ(ಅಡ್ಡೂರು) ಸೇತುವೆಯ ಧಾರಣಾ ಸಾಮರ್ಥ್ಯ ಪರಿಶೀಲನೆಗಾಗಿ ಬಂದಿದ್ದ ಪರೀಕ್ಷಾ ಯಂತ್ರ, ಗುರುವಾರ ಸೇತುವೆಯ ಸಾಮರ್ಥ್ಯ ಪರೀಕ್ಷಿಸಿ ತೆರಳಿದೆ.
ಸೆ.9ರಂದು ಸಾಮರ್ಥ್ಯ ಪರೀಕ್ಷಾ ಯಂತ್ರ ಪೊಳಲಿ ಸೇತುವೆಯಲ್ಲಿ ಬಂದು, ಮೂರು ದಿನ ಸೇತುವೆಯಲ್ಲೇ ಇದ್ದು, ಸೇತುವೆಯ ಪ್ರತಿ ಕಂಬದ ಸಾಮರ್ಥ್ಯ ಪರೀಕ್ಷಿಸಿದೆ. ಪೊಳಲಿ ಸೇತುವೆಯ ಸಾಮರ್ಥ್ಯ ಕುರಿತ ವರದಿಯನ್ನು ಮೂರ್ನಾಲ್ಕು ದಿನದೊಳಗೆ ಲೋಕೋಪಯೋಗಿ ಇಲಾಖಾ ಇಂಜಿನಿಯರ್‌ಗೆ ಸಲ್ಲಿಸಲಿದ್ದು, ಆ ಬಳಿಕ ಅವರು ಈ ವರದಿಯನ್ನು ಜಿಲ್ಲಾಧಿಕಾರಿಗೆ ಒಪ್ಪಿಸಲಿದ್ದಾರೆ. ಈ ವರದಿಯನ್ನಾಧರಿಸಿ ಜಿಲ್ಲಾಧಿಕಾರಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಈ ನಡುವೆ ಪೊಳಲಿ ಸೇತುವೆ ಹೋರಾಟ ಸಮಿತಿ ವರದಿಗಾಗಿ ಕಾದು ನಂತರ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದೆ. ಪೊಳಲಿ ಸೇತುವೆ ದುರಸ್ತಿಯ ನೆಪದಲ್ಲಿ ಜಿಲ್ಲಾಡಳಿತ ಏಕಾಏಕಿ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿದಲ್ಲದೆ ಎರಡೂ ಬದಿಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿದ ಪರಿಣಾಮ ಪೊಳಲಿ ಅಸುಪಾಸಿನ ಗ್ರಾಮಸ್ಥರು, ಶಾಲಾ ಮಕ್ಕಳು ಹಾಗೂ ಪೊಳಲಿ ಕ್ಷೇತ್ರಕ್ಕಾಗಮಿಸುವ ಭಕ್ತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಈ ನಡುವೆ ಸೇತುವೆಯ ವಸ್ತುಸ್ಥಿತಿ ಪರಿಶೀಲಿಸಲು ಆಗಮಿಸಿದ್ದ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಗ್ರಾಮಸ್ಥರ ಅಹವಾಲು ಆಲಿಸಿ ಧಾರಣಾ ಪರೀಕ್ಷಾ ಯಂತ್ರ ಪರಿಶೀಲಿಸಿ ನೀಡುವ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಸೋಮವಾರ ಪೊಳಲಿಯ ಸರ್ವಮಂಗಳ ಸಭಾಭವನದಲ್ಲಿ ಸ್ಥಳೀಯ ನಾಲ್ಕೈದು ಗ್ರಾಮದ ಗ್ರಾಮಸ್ಥರು ಸಭೆ ಸೇರಿ ಚರ್ಚಿಸುತ್ತಿರುವಾಗಲೇ ಕಾಕತಾಳೀಯ ಎಂಬಂತೆ ಧಾರಣಾ ಸಾಮರ್ಥ್ಯ ಪರೀಕ್ಷಾ ಯಂತ್ರ ಪೊಳಲಿ ಸೇತುವೆಯ ಮೇಲೆ ಬಂದಿಳಿದಿತ್ತು.