ಮುಂಡರಗಿ: ಪಟ್ಟಣದ ೬ನೇ ವಾರ್ಡ್ನಲ್ಲಿ ಅಪೂರ್ಣಗೊಂಡ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಕಾಮಗಾರಿ ಸ್ಥಗಿತಗೊಂಡ ಸ್ಥಳದಲ್ಲಿಯೇ ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ಎಂ.ಎ. ನೂರುಲ್ಲಾಖಾನ್‌ಗೆ ಮನವಿ ಸಲ್ಲಿಸಿದರು.
ತಹಸೀಲ್ದಾರ್ ಕಾರ್ಯಾಲಯ ದಕ್ಷಿಣ ಭಾಗದಲ್ಲಿ ಗದಗ ಮುಖ್ಯರಸ್ತೆಗೆ ಹೊಂದಿಕೊAಡಿರುವ ರಸ್ತೆಯಲ್ಲಿ ಅರ್ಧದಷ್ಟು ಮಾತ್ರ ರಸ್ತೆ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ.
ಅಪೂರ್ಣ ರಸ್ತೆಯಿಂದ ವಾರ್ಡ್ನ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇದರಿಂದ ಯಾವುದೇ ಉಪಯೋಗವಿಲ್ಲ. ಪೂರ್ಣ ಪ್ರಮಾಣದಲ್ಲಿ ರಸ್ತೆ ನಿರ್ಮಿಸಿದರೆ ಮಾತ್ರ ಅನುಕೂಲವಾಗುತ್ತದೆ.
ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಂತು ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತದೆ. ಈ ಸ್ಥಳದಲ್ಲಿ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ.
ಗದಗ ಮುಖ್ಯರಸ್ತೆಯಿಂದ ಅಯ್ಯಪ್ಪಸ್ವಾಮಿ ರಸ್ತೆಯವರೆಗೆ ರಸ್ತೆ ಕಾಮಗಾರಿ ಕೈಗೊಳ್ಳಬೇಕು. ಹಾಗೆಯೆ ಚರಂಡಿ ಹಾಳಾಗಿದ್ದು ಅದನ್ನು ಸರಿಪಡಿಸಬೇಕು.
೨.೫ ಇಂಚಿನ ಪೈಪ್‌ಲೈನ್ ವ್ಯವಸ್ಥೆಯಿಂದ ಸಮರ್ಪಕ ನೀರು ಪೂರೈಕೆಯಾಗುವುದಿಲ್ಲ. ಆದ್ದರಿಂದ ೩ ಇಂಚಿನ ಪೈಪ್ ಅಳವಡಿಸಿ ಸಮರ್ಪಕವಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮುಖ್ಯಾಧಿಕಾರಿ ನೂರುಲ್ಲಾಖಾನ್ ಮಾತನಾಡಿ, ಸದ್ಯ ನಗರೋತ್ಥಾನ ಯೋಜನೆಯಡಿ ೧೨೫ ಮೀ.ರಸ್ತೆ ಕಾಮಗಾರಿ ಕೈಗೊಂಡಿದ್ದು, ಇನ್ನುಳಿದ ೧೨೫ ಮೀ. ರಸ್ತೆಯನ್ನು ೧೫ನೇ ಹಣಕಾಸು ಯೋಜನೆಯಡಿ ಪೂರ್ಣಗೊಳಿಸಲಾಗುತ್ತದೆ.
೩ ಇಂಚಿನ ಪೈಪ್ ಅಳವಡಿಸಿ ಸಮರ್ಪಕ ನೀರು ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.