ಜಿಲ್ಲೆ

ಎತ್ತಿನಹೊಳೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ

ಅರಸೀಕೆರೆ: ಎತ್ತಿನಹೊಳೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಒತ್ತು ನೀಡುವಂತೆ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಹಾಗೂ ಹುಲ್ಲಳ್ಳಿ ಸುರೇಶ್ ಸೂಚನೆ ನೀಡಿದರು.


ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧದ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರು ಮಾತನಾಡಿದರು.
ಬಹುನಿರೀಕ್ಷಿತ ಯೋಜನೆ ಅರಸೀಕೆರೆ ಹಾಗೂ ಬೇಲೂರು ಕ್ಷೇತ್ರ ವ್ಯಾಪ್ತಿಯ ಜಾವಗಲ್ ಹೋಬಳಿಯ ಅಯಕಟ್ಟಿನ ಜಾಗಗಳಲ್ಲಿ 10 ಕಿ.ಮೀ. ನಾಲೆ ನಿರ್ಮಾಣವಾಗಬೇಕಿದೆ. ನೂರು ದಿನಗಳಲ್ಲಿ ಪ್ರಾಯೋಗಿಕವಾಗಿ ನೀರು ಹರಿಸುವುದಾಗಿ ಜಲ ಸಂಪನ್ಮೂಲ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ ನೀಡಬೇಕು ಎಂದು ಸಹಾಯಕ ಇಂಜಿನಿಯರ್ ಇಂದುಕುಮಾರ್‌ಗೆ ಸೂಚನೆ ನೀಡಿದರು.
ಬಾಣಾವರ ಹಾಗೂ ಅರಸೀಕೆರೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ವಿನಾಕಾರಣ ತೊಂದರೆ ನೀಡಲಾಗುತ್ತಿದೆ ಎನ್ನುವ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ನೀವೇನು ಮಾಡುತ್ತಿದ್ದೀರಿ ಎಂದು ಶಾಸಕರು ಮಹಿಳಾ ನೋಂದಣಾಧಿಕಾರಿ ಪಾರ್ವತಮ್ಮ ಅವರಿಗೆ ಪ್ರಶ್ನಿಸಿದರು.
ಸರ್ಕಾರ ಪ್ರಸಕ್ತ ಸಾಲಿನಲ್ಲಿ 19 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನೀಡಿದ್ದು ಎಲ್ಲ ಪ್ರಕ್ರಿಯೆಗಳು ಆನ್‌ಲೈನ್ ಮೂಲಕ ನಡೆಯುತ್ತಿದ್ದು ಜನರಿಗೆ ತೊಂದರೆ ನೀಡುತ್ತಿಲ್ಲ. ಬೇರೆ ಯಾರಾದರೂ ಲಂಚ ಪಡೆದಿದ್ದರೆ ನಾನೇನು ಮಾಡಲಾಗದು. ಅಂತಹ ಕಾರ್ಯಕ್ಕೆ ನಾನು ಮುಂದಾಗಿಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಂಡರು. ಆಯ್ತು ಬಿಡಿ ನಿಮಗೆ ಮುಂದೆ ಪ್ರಶಸ್ತಿ ಕೊಡೋಣ ಎಂದು ಇಬ್ಬರೂ ಶಾಸಕರು ಹಾಸ್ಯ ಚಟಾಕಿ ಹಾರಿಸಿದರು.


ಕೃಷಿ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಿ: ಮಳೆ ಕೊರತೆಯಿಂದ ಅನ್ನದಾತ ಕಂಗಾಲಾಗಿದ್ದು, ಬರ ಪಟ್ಟಿಗೆ ಸೇರಿಸಲು ಕೃಷಿ ಸಚಿವ ಚಲುವರಾಯಸ್ವಾಮಿ ಜತೆ ಮಾತನಾಡಿದ್ದೇನೆ. ಕೇಂದ್ರ ಸರ್ಕಾರದ ಅವೈಜ್ಞಾನಿಕ ಮಾರ್ಗಸೂಚಿಗಳು ಇಂತಹ ಬೆಳವಣಿಗೆಗಳಿಗೆ ಕಾರಣವಾಗಿದೆ. ಪೂರ್ವ ಮುಂಗಾರು ಕೈಕೊಟ್ಟಿದ್ದು ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ರಾಗಿ, ಮುಸುಕಿನ ಜೋಳ ನಾಶವಾಗಲಿದೆ. ಕೃಷಿ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಬೇಕು ಎಂದು ಕೆ.ಎಂ.ಶಿವಲಿಂಗೇಗೌಡ ಅವರು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎ.ಪಿ.ಶಿವಕುಮಾರ್‌ಗೆ ತಿಳಿಸಿದರು.
ಶಾಲಾ ಕೊಠಡಿಗಳ ದುರಸ್ತಿ ಕುರಿತು ಬಿಇಒ ಮೋಹನ್‌ಕುಮಾರ್ ಹಾಗೂ ಮಳೆಯಿದ ಹಾಳಾಗಿರುವ ರಸ್ತೆ ದುರಸ್ತಿಪಡಿಸುವ ಬಗ್ಗೆ ಜಿಪಂ ಎಇಇ ಬಸವರಾಜ್ ಸಮಗ್ರ ಮಾಹಿತಿ ನೀಡಿದರು. ತೋಟಗಾರಿಕೆ, ಆರೋಗ್ಯ, ಆಹಾರ, ಸಮಾಜಕಲ್ಯಾಣ, ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಸೇರಿ ವಿವಿಧ ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.


ತಾಪಂ ಇಒ ನಾಗರಾಜ್, ತಹಸೀಲ್ದಾರ್ ಎಂ.ಜಿ.ಸಂತೋಷ್‌ಕುಮಾರ್, ಪೌರಾಯುಕ್ತ ಕೃಷ್ಣಮೂರ್ತಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಜರಿದ್ದರು.